ಬೀಜಿಂಗ್ : '1989ರ ತಿಯಾನನ್‌ಮನ್ ಪ್ರತಿಭಟನೆ ಮತ್ತು ಹತ್ಯಾಕಾಂಡ'ದ ವಾರ್ಷಿಕ ಸ್ಮರಣಾರ್ಥ ಕಾರ್ಯಕ್ರಮಗಳ ಮೇಲೆ ಹೇರಿದ್ದ ನಿರ್ಬಂಧವನ್ನು ಈ ವರ್ಷ ಚೀನಾ ಮತ್ತಷ್ಟು ಬಿಗಿಗೊಳಿಸಿದೆ. ಹತ್ಯಾಕಾಂಡದಲ್ಲಿ ಮಡಿದವರಿಗೆ ಗೌರವ ಸಲ್ಲಿಸಲು ಹಾಂಗ್‌ಕಾಂಗ್‌ನ ವಿಕ್ಟೋರಿಯಾ ಪಾರ್ಕ್‌ನಲ್ಲಿ ನೆರೆದಿದ್ದವರಲ್ಲಿ ಕನಿಷ್ಠ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೀಜಿಂಗ್‌ನ ತಿಯಾನನ್‌ಮನ್ ಚೌಕದಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಚೀನಾ ಸೇನೆಯು 1989ರ ಜೂನ್ 3ರ ರಾತ್ರಿ ದಾಳಿ ನಡೆಸಿತ್ತು. ಈ ದಾಳಿಯು ಹಲವಾರು ಜನರ ಸಾವು ನೋವಿಗೆ ಕಾರಣವಾಗಿತ್ತು. ಆ ಕರಾಳ ರಾತ್ರಿ ಎಷ್ಟು ಜನರು ಮೃತಪಟ್ಟರು ಎಂಬ ಕುರಿತು ಈಗಲೂ ಮಾಹಿತಿ ಹೊರಬಿದ್ದಿಲ್ಲ.
ಈ ಘಟನೆಯ ಕುರಿತು ಚರ್ಚಿಸುವುದು, ಸ್ಮರಣಾರ್ಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದನ್ನು ಚೀನಾದಲ್ಲಿ ನಿಷೇಧಿಸಲಾಗಿದೆ. ಘಟನೆಯ ವಾರ್ಷಿಕ ಸ್ಮರಣೆಯ ಹಿನ್ನೆಲೆಯಲ್ಲಿ ಬೀಜಿಂಗ್‌ನ ತಿಯಾನನ್‌ಮನ್ ಚೌಕಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು. ಪಾದಚಾರಿಗಳು ಮತ್ತು ಸೈಕಲ್ ಸವಾರರ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತಿತ್ತು.
ಆದರೂ, ಪ್ರವಾಸಿಗಳು ಈ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡುವುದು ಮುಂದುವರೆದಿತ್ತು. ಈ ಚೌಕದ ಒಳಗೆ ಪ್ರವೇಶ ಪಡೆಯಲು ನೂರಾರು ಜನರು ಸರತಿಯಲ್ಲಿ ನಿಂತಿದ್ದರು.