HEALTH TIPS

ಆಷಾಢ ಮಾಸದಲ್ಲಿ ತುಳುವರು ಈ ವಿಶೇಷ ಆಹಾರವನ್ನು ತಿನ್ನೋದ್ಯಾಕೆ ಗೊತ್ತಾ?

 ಅಷಾಢ ಮಾಸವೆಂದರೆ ತುಳುವರಿಗೆ ಸಂಭ್ರಮ. ಈ ಸಂದರ್ಭದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯದಿದ್ದರೂ ಕೂಡ ಕೆಲವೊಂದು ವಿಶೇಷ ಆಚರಣೆಗಳನ್ನು ತುಳುನಾಡಿನಲ್ಲಿ ಆಚರಣೆ ಮಾಡಲಾಗುತ್ತದೆ. ಅದ್ರಲ್ಲಿ ಹಳ್ಳಿ ಸೊಗಡಿನ ತಿಂಡಿ-ತಿನಿಸುಗಳು, ವಿಶೇಷ ಸಾಂಬಾರು, ಪಲ್ಯಗಳನ್ನು ತಯಾರಿಸಿ ತಿನ್ನುವ ಪದ್ಧತಿಯಿದೆ. ಇದು ತುಳುನಾಡಿನ ಸಂಪ್ರದಾಯ ಮಾತ್ರವಲ್ಲದೇ ಆರೋಗ್ಯದ ದೃಷ್ಟಿಯಿಂದಲೂ ತುಂಬಾನೇ ಒಳ್ಳೆಯದು. ಅಷ್ಟಕ್ಕು ಆಷಾಢ ಮಾಸದಲ್ಲಿ ತುಳುನಾಡಿನಲ್ಲಿ ತಯಾರಿಸುವ ವಿಶೇಷ ಖಾದ್ಯಗಳು ಯಾವುದು ಅನ್ನೋದನ್ನು ತಿಳಿಯೋಣ.

ತಜಂಕ್ ಸೊಪ್ಪು

ಆರೋಗ್ಯದ ದೃಷ್ಟಿಯಿಂದ ಗಮನಿಸಿದ್ರೆ ಈ ಸೊಪ್ಪು ತುಂಬಾನೇ ಒಳ್ಳೆಯದು. ಮಳೆಗಾಲದಲ್ಲಿ ಈ ಸೊಪ್ಪು ಹೆಚ್ಚಾಗಿ ಕಾಣ ಸಿಗುತ್ತದೆ. ವಿಟಮಿನ್ ನಿಂದ ಸಮೃದ್ಧವಾಗಿರುವ ಈ ಸೊಪ್ಪನ್ನು ತುಳುವರು ಆಷಾಢದಲ್ಲಿ ಹೆಚ್ಚಾಗಿ ಸೇವಿಸುತ್ತಾರೆ. ಈ ಸೊಪ್ಪಿನಿಂದ ಸಾಂಬಾರು, ಪಲ್ಯ ತಯಾರು ಮಾಡುತ್ತಾರೆ. ಇನ್ನೂ ತಜಂಕ್ ಸೊಪ್ಪಿನ ಜೊತೆಗೆ ಹಲಸಿನ ಬೀಜ ಹಾಕಿ ಪಲ್ಯ ತಯಾರಿಸಿದ್ರೆ ಮತ್ತೂ ರುಚಿಕರವಾಗಿರುತ್ತೆ. ಮಳೆಗಾಲದಲ್ಲಿ ಸೊಪ್ಪಾಗಿ ಬೆಳೆಯುವ ಈ ಸೊಪ್ಪು ಗದ್ದೆ, ತೋಟಗಳಲ್ಲಿ ಕಾಣ ಸಿಗುತ್ತದೆ.

ಕೆಸುವಿನ ಎಳೆ ಕೆಸುವಿನ ಎಲೆಯೂ ಕೂಡ ಒಂದು ಆರೋಗ್ಯಕಾರಿ ಸೊಪ್ಪಾಗಿದೆ. ಇದು ಗಿಡದ ರೀತಿ ಇದ್ದು, ಇದರ ದಂಟನ್ನು ಕೂಡ ಆಹಾರವಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ ತೋಟದಲ್ಲಿ ಇದನ್ನು ಬೆಳೆಯುತ್ತಾರೆ. ಈ ಸಸ್ಯಕ್ಕೆ ಯಾವುದೇ ರೀತಿ ಪಾಲನೆ, ಪೋಷಣೆ ಬೇಕಾಗಿಲ್ಲ. ಅದರಷ್ಟಕ್ಕೆ ಬೆಳೆಯುತ್ತದೆ. ಅನೇಕರು ಅಡಿಕೆ ಬೆಳವಣಿಗೆ ತೊಂದರೆ ಆಗುತ್ತದೆ ಎಂದು ಇದನ್ನು ಕಿತ್ತು ಎಸೆಯುತ್ತಾರೆ. ಆಯುರ್ವೇದ ಪ್ರಕಾರ ಆಷಾಢದಲ್ಲಿ ಇದನ್ನು ಸೇವನೆ ಮಾಡಿದ್ರೆ ಅನೇಕ ರೋಗಗಳನ್ನು ಗುಣ ಮಾಡುತ್ತೆ ಎಂಬ ನಂಬಿಕೆಯಿದೆ.

ಕಣಲೆ ಕಣಲೆಯು ಕೂಡ ಆರೋಗ್ಯದ ದೃಷ್ಟಿಯಿಂದ ತುಂಬಾನೆ ಒಳ್ಳೆಯದು. ಈಗಂತೂ ಕಣಲೆ ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ಕಾಡಿನಲ್ಲಿ ಇರುವ ಬಿದಿರಿನ ಸಸ್ಯದಿಂದಲೇ ಕಣಲೆಯನ್ನು ತೆಗೆಯಲಾಗುತ್ತದೆ. ತಿನ್ನೋದಕ್ಕೆ ತುಂಬಾನೇ ಟೇಸ್ಟಿಯಾಗಿರುತ್ತೆ. ಮೊದಲಿಗೆ ಕಣಲೆಯನ್ನು ತಂದು, ಅದನ್ನು ಚಿಕ್ಕ ಚಿಕ್ಕದಾಗಿ ಕೊಚ್ಚಿ ಉಪ್ಪು ಹಾಕಿ ಎರಡು ದಿನಗಳ ಕಾಲ ಇಡಬೇಕು. ಆ ನಂತರ ಅದನ್ನು ಅಡುಗೆಗೆ ಬಳಕೆ ಮಾಡಬೇಕು. ಕಣಲೆಯ ಜೊತೆಗೆ ಹೆಸರು ಕಾಳು ಹಾಕಿ ಪಲ್ಯ ಮಾಡಿದರೆ ತುಂಬಾನೇ ಚೆನ್ನಾಗಿರುತ್ತದೆ. 

ಪತ್ರೊಡೆ ಪತ್ರೊಡೆಯು ತುಳುನಾಡಿನಲ್ಲಿ ತಯಾರಿಸುವ ಪ್ರಖ್ಯಾತ ತಿಂಡಿಯಾಗಿದೆ. ಅಕ್ಕಿ ಹಾಗೂ ಕೆಸುವಿನ ಎಲೆಯಿಂದ ಇದನ್ನು ತಯಾರು ಮಾಡಲಾಗುತ್ತದೆ. ಆಷಾಢದಲ್ಲಿ ಪತ್ರೊಡೆ ತಿನ್ನದೇ ತುಳುವರಿಗೆ ತಮ್ಮ ದಿನವೇ ಪೂರ್ತಿ ಆಗೋದಿಲ್ಲ. ಪತ್ರೊಡೆ ತಯಾರಿಸೋದು ಕೊಂಚ ಕಷ್ಟ ಆದ್ರೂ ಕೂಡ ಅದರ ರುಚಿಗೆ ಸರಿಸಾಟಿ ಮತ್ತೊಂದಿಲ್ಲ. ತುಳುನಾಡಿನಿಂದ ಹೋಗಿ ಸಿಟಿಯಲ್ಲಿ ವಾಸ ಮಾಡ್ತಿರೋರಂತೂ ಆಷಾಢ ಮಾಸದಲ್ಲಿ ಪತ್ರೊಡೆ ತಿನ್ನೋದಕ್ಕೆ ಹಾತೊರೆಯುತ್ತಾರೆ. ಆರೋಗ್ಯದ ದೃಷ್ಟಿಯಿಂದ ಪತ್ರೊಡೆ ತುಂಬಾನೇ ಒಳ್ಳೆಯದು. ಆದರೆ ಲೆಕ್ಕಕ್ಕಿಂತ ಹೆಚ್ಚು ಸೇವಿಸೋದಕ್ಕೆ ಹೋಗಬೇಡಿ. ಯಾಕಂದ್ರೆ ಉಷ್ಣ ಹೆಚ್ಚಾಗುವ ಸಾಧ್ಯತೆಯಿದೆ.

ಉಪ್ಪಿನ ಸೊಳೆ ಉಪ್ಪಿನ ಸೊಳೆ ಅಂದ್ರೆ ಹೆಚ್ಚಿನವರಿಗೆ ಗೊತ್ತಿರ್ಲಿಕ್ಕಿಲ್ಲ. ಹಲಸಿನ ಕಾಯಿಯನ್ನು ತೆಗೆದು ಅದರಲ್ಲಿರುವ ಸೊಳೆಯನ್ನು ಪ್ರತ್ಯೇಕಿಸಿ ಉಪ್ಪು ಹಾಕಿ ಒಂದು ಡಬ್ಬದಲ್ಲಿ ಹಾಕಿಡಲಾಗುತ್ತದೆ. ಇದನ್ನು ತುಳುವರು ವರ್ಷಪೂರ್ತಿ ಉಪಯೋಗ ಮಾಡುತ್ತಾರೆ. ಯಾವಾಗ ಉಪ್ಪಿನ ಸೊಳೆ ಮಾಡಬೇಕು ಅನ್ನಿಸುತ್ತೋ ಆವಾಗ ಡಬ್ಬದಿಂದ ಸ್ವಲ್ಪ ಸ್ವಲ್ಪವೇ ತೆಗೆದು ಪದಾರ್ಥ ಮಾಡುತ್ತಾರೆ. ಉಪ್ಪಿನ ಸೊಳೆಯಿಂದ ಸಂಬಾರು ಪಲ್ಯ ತಯಾರು ಮಾಡಲಾಗುತ್ತದೆ. ಇನ್ನೂ ಪಲ್ಯಕ್ಕೆ ಉಪ್ಪಿನ ಸೊಳೆ ಜೊತೆಗೆ ಕಡ್ಲೆ ಸೇರಿಸಿದ್ರೆ ತಿನ್ನೋದಕ್ಕೆ ತುಂಬಾನೇ ರುಚಿಯಾಗಿರುತ್ತದೆ.

ತಿಮರೆ ಚಟ್ನಿ

ತಿಮರೆ ಚಟ್ನಿ ತುಳುನಾಡಿನಲ್ಲಿ ತುಂಬಾನೇ ಪ್ರಖ್ಯಾತಿಯನ್ನು ಪಡೆದಿದೆ. ತಿಮರೆ ಎಂದರೆ ಒಂದೆಲಗ. ಆಷಾಢ ಮಾಸದಲ್ಲಿ ತುಳುವರು ಇದರ ಚಟ್ನಿಯನ್ನು ಹೆಚ್ಚಾಗಿ ತಿನ್ನುತ್ತಾರೆ. ಬಿಸಿ ಬಿಸಿ ಗಂಜಿಯ ಜೊತೆಗೆ ತಿಮರೆ ಚಟ್ನಿ ತಿನ್ನುತ್ತಿದ್ದರೆ, ಆ ರುಚಿಯೇ ಬೇರೆ. ಬುದ್ಧಿಶಕ್ತಿ ಹೆಚ್ಚಿಸೋದಕ್ಕೂ ಒಂದೆಲಗದ ತುಂಬಾನೇ ಒಳ್ಳೆಯದು. ಹೀಗಾಗಿ ಮಕ್ಕಳಿಗೆ ಒಂದೆಲಗದ ಎಲೆಯನ್ನು ಬೆಳಗ್ಗೆ ಎದ್ದ ತಕ್ಷಣ ತಿನ್ನೋದಕ್ಕೆ ಕೊಟ್ಟರೆ ಅವರ ಜ್ಞಾಪಕ ಶಕ್ತಿ ಉತ್ತಮವಾಗುತ್ತದೆ.

ಹಲಸಿನ ಹಣ್ಣಿನ ಗಟ್ಟಿ

ಹಲಸಿನ ಹಣ್ಣಿನ ಗಟ್ಟಿಯೂ ಕೂಡ ತುಳುನಾಡಿನ ಪ್ರಮುಖ ಖಾದ್ಯಗಳಲ್ಲಿ ಒಂದಾಗಿದೆ. ಹಲಸಿನ ಹಣ್ಣು ಲಭ್ಯವಿರೋ ಸಮಯದಲ್ಲಿ ಇದನ್ನು ಹೆಚ್ಚಾಗಿ ತಿನ್ನಲಾಗುತ್ತದೆ. ಹಲಸಿನ ಹಣ್ಣು ಹಾಗೂ ಅಕ್ಕಿಯನ್ನು ಕಡೆದು ಇದನ್ನು ತಯಾರು ಮಾಡಲಾಗುತ್ತದೆ. ಜೊತೆಗೆ ಇದಕ್ಕೆ ಸ್ವಲ್ಪ ತೆಂಗಿನ ಕಾಯಿ ಸೇರಿಸಿದ್ರೆ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.

ಇದಿಷ್ಟೇ ಅಲ್ಲದೇ, ಕಾಡು, ತೋಟ, ಗದ್ದೆಗಳಲ್ಲಿ ಲಭ್ಯವಿರುವ ಅನೇಕ ವಸ್ತುಗಳಲ್ಲಿಂದ ವಿವಿಧ ಬಗೆಯ ವಸ್ತುಗಳಿಂದ ರುಚಿರುಚಿಯಾದ ಖಾದ್ಯಗಳನ್ನು ತಯಾರಿಸಿ ತಿನ್ನುವ ಪದ್ಧತಿಯನ್ನು ತುಳುನಾಡಿನಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.





Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries