ಕುಂಬಳೆ: ಮುಳ್ಳೇರಿಯ ಹವ್ಯಕ ಮಂಡಲದ ವಿದ್ಯಾರ್ಥಿ ವಾಹಿನಿ ನೇತೃತ್ವದಲ್ಲಿ ಇತ್ತೀಚೆಗೆ ಜರಗಿದ ಜೀವನಬೋಧೆ ಶಿಬಿರದಲ್ಲಿ ಸಂಗ್ರಹವಾಗಿ ಉಳಿದ ಮೊತ್ತವನ್ನು ಶ್ರೀಗುರುಗಳ ನಿರ್ದೇಶನದಂತೆ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠಕ್ಕೆ ಹಸ್ತಾಂತರಿಸಲಾಯಿತು.
ಶಾಲೆಯಲ್ಲಿ ಜರಗಿದ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಳ್ಳೇರಿಯ ಮಂಡಲ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಮಾತನಾಡಿ 2 ತಿಂಗಳ ರಜೆಯಲ್ಲಿ ವಿದ್ಯಾರ್ಥಿಗಳಿಗಾಗಿ ಜರಗಿದ ಜೀವನಬೋಧೆ ಶಿಬಿರ ಜೀವನೋತ್ಸಾಹವನ್ನು ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಇನ್ನು ಮುಂದೆಯೂ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಭದ್ರತೆಗೆ ಅನುಕೂಲಕರ ವಾತಾವರಣವನ್ನು ನಿರ್ಮಿಸುವುದೇ ನಮ್ಮ ಉದ್ದೇಶ ಎನ್ನುತ್ತಾ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದ ಆರ್ಥಿಕ ಬೆಳವಣಿಗೆಗೆ ಮಂಡಲದ ನಿರಂತರ ಸಹಕಾರವಿದೆ ಎಂದರು. ಮಂಡಲ ಉಪಾಧ್ಯಕ್ಷೆ ಕುಸುಮ ಪೆರ್ಮುಖ, ವಿದ್ಯಾರ್ಥಿವಾಹಿನಿ ಪ್ರಧಾನ ಶ್ಯಾಮಪ್ರಸಾದ ಕುಳಮರ್ವ, ಕುಂಬಳೆ ವಲಯ ಅದ್ಯಕ್ಷ ಡಾ| ಡಿ.ಪಿ. ಭಟ್, ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಶೇಡಿಗುಮ್ಮೆ, ಗುಂಪೆ ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡೆಕ್ಕಾನ, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಶ್ಯಾಮರಾಜ ದೊಡ್ಡಮಾಣಿ, ಮುಖ್ಯೋಪಾಧ್ಯಾಯ ಶ್ಯಾಮ ಭಟ್ ದರ್ಭೆಮಾರ್ಗ, ಬಾಲಕೃಷ್ಣ ಶರ್ಮ ಅನಂತಪುರ, ಪೆರ್ಮುಖ ಈಶ್ವರ ಭಟ್ ಉಪಸ್ಥಿತರಿದ್ದರು. ವಿದ್ಯಾಲಯದ ಅಧ್ಯಾಪಕ ಹರಿಪ್ರಸಾದ ನಿರೂಪಿಸಿದರು. 2 ತಿಂಗಳ ಬೇಸಿಗೆ ರಜೆಯ ಸಂದರ್ಭದಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ 3ದಿನಗಳ ಶಿಬಿರ ಹಾಗೂ ಪೆರಡಾಲ ಶ್ರೀ ಉದನೇಶ್ವರ ವಸಂತ ವೇದಪಾಠ ಶಾಲೆಯ ಮಕ್ಕಳಿಗೆ ಒಂದು ದಿನದ ಶಿಬಿರ ನಡೆದಿತ್ತು. ನಂತರ ಶಿಬಿರಾರ್ಥಿಗಳು ಹಾಗೂ ಪಾಲಕರು ಗೋಕರ್ಣದ ಅಶೋಕೆಯಲ್ಲಿ ಕುಲಗುರುಗಳಾದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದವನ್ನು ಪಡೆದಿದ್ದರು.

.jpg)
