HEALTH TIPS

ಒಡಿಶಾ ರೈಲು ದುರಂತಕ್ಕೆ ಕಾರಣವಾಯಿತೇ ವಿಧ್ವಂಸಕ ಸಂಚು? ಸ್ಪೋಟಕ ಮಾಹಿತಿ ಬಹಿರಂಗ

                  ಬಾಲಸೋರ್: ಒಡಿಶಾದ ಬಾಲಸೋರ್‌ ಜಿಲ್ಲೆಯಲ್ಲಿ ರೈಲುಗಳ ಅಪಘಾತವು ಚಾಲಕನ ತಪ್ಪಿನಿಂದಾಗಿ ಸಂಭವಿಸಿದೆ ಎಂಬುದನ್ನು ಭಾರತೀಯ ರೈಲ್ವೆ ಭಾನುವಾರ ತಳ್ಳಿಹಾಕಿದೆ. 'ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿರುವುದು ಅಪಘಡಕ್ಕೆ ಕಾರಣ.

                 ವ್ಯವಸ್ಥೆಯಲ್ಲಿ ಮಾಡಿರುವ ಈ ಬದಲಾವಣೆಯು ವಿಧ್ವಂಸಕ ಕೃತ್ಯದ ಸಾಧ್ಯತೆಯತ್ತ ಬೊಟ್ಟು ಮಾಡುತ್ತದೆ' ಎಂದು ಹೇಳಿದೆ.

              ಬಾಲಸೋರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡ, 'ಎಲೆಕ್ಟ್ರಾನಿಕ್‌ ಇಂಟರ್‌ಲಾಕಿಂಗ್‌ ವ್ಯವಸ್ಥೆ ಹಾಗೂ ಪಾಯಿಂಟ್‌ ಯಂತ್ರದಲ್ಲಿ ಮಾಡಲಾದ ಬದಲಾವಣೆಯೇ ರೈಲುಗಳ ಅಪಘಾತಕ್ಕೆ ಮೂಲ ಕಾರಣ' ಎಂದು ಹೇಳಿದ್ದಾರೆ.

               'ಈ ಅವಘಡಕ್ಕೆ ಹೊಣೆಯಾಗಿರುವವರನ್ನು ಸಹ ಗುರುತಿಸಲಾಗಿದೆ. ಒಳಗಿನವರು ಅಥವಾ ಹೊರಗಿನವರು ಈ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿರಬಹಹುದು. ಇದು ವಿಧ್ವಂಸಕ ಕೃತ್ಯ ಆಗಿರಬಹುದು. ಯಾವ ಸಾಧ್ಯತೆಯನ್ನೂ ನಾವು ತಳ್ಳಿ ಹಾಕುತ್ತಿಲ್ಲ. ಈ ಕುರಿತು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತೇವೆ' ಎಂದು ಸ್ಪಷ್ಟಪಡಿಸಿದರು.

                   'ಮೂರು ರೈಲುಗಳ ಅಪಘಾತಕ್ಕೂ, ಸುರಕ್ಷಾ ವ್ಯವಸ್ಥೆಯಾದ 'ಕವಚ'ಕ್ಕೂ ಸಂಬಂಧ ಇಲ್ಲ. ಈ ಅಪಘಾತಕ್ಕೆ ಮೂಲ ಕಾರಣವನ್ನು ಪತ್ತೆ ಹಚ್ಚಲಾಗಿದ್ದು, ಹೆಚ್ಚಿನ ವಿವರಗಳನ್ನು ನೀಡಬಯಸುವುದಿಲ್ಲ' ಎಂದರು.

               ಸಿಬಿಐ ತನಿಖೆಗೆ ಶಿಫಾರಸು (ಭುವನೇಶ್ವರ ವರದಿ): ಬಾಲಸೋರ್‌ ಬಳಿ ಸಂಭವಿಸಿದ ರೈಲುಗಳ ಅಪಘಾತ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಭುವನೇಶ್ವರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

            'ದುರಸ್ತಿ ಪೂರ್ಣ': ಅಪಘಾತ ಸಂಭವಿಸಿದ ಸ್ಥಳದಲ್ಲಿನ ಎರಡು ಹಳಿಗಳ ದುರಸ್ತಿ ಕಾರ್ಯ ಪೂರ್ಣಗೊಂಡಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್‌ ಮಾಡಿದ್ದಾರೆ.

             'ರೈಲುಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೇಬಲ್‌ಗಳ ದುರಸ್ತಿ ಕಾರ್ಯ ಮುಂದುವರಿದಿದೆ. ಹೀಗಾಗಿ, ದುರಸ್ತಿ ಮಾಡಲಾದ ಎರಡು ಮಾರ್ಗಗಳಲ್ಲಿ ಸದ್ಯ ಡೀಸೆಲ್ ಚಾಲಿತ ರೈಲುಗಳು ಮಾತ್ರ ಸಂಚರಿಸಬಹುದು' ಎಂದು ಅಧಿಕಾರಿಗಳು ಹೇಳಿದ್ದಾರೆ.

              ಹೊರಗಿನವರ ಕೃತ್ಯ ಶಂಕೆ: ರೈಲುಗಳಿಗೆ ಸಿಗ್ನಲ್‌ ನೀಡುವುದು ಹಾಗೂ ರೈಲುಗಳ ಸುರಕ್ಷಿತ ಸಂಚಾರದಲ್ಲಿ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ ವ್ಯವಸ್ಥೆ ಹಾಗೂ 'ಪಾಯಿಂಟ್‌ ಯಂತ್ರ' ಮಹತ್ವದ ಪಾತ್ರ ವಹಿಸುತ್ತವೆ.

              ಈ ವ್ಯವಸ್ಥೆಗಳ ಕಾರ್ಯದ ಬಗ್ಗೆ ರೈಲ್ವೆ ಅಧಿಕಾರಿಗಳು ದೆಹಲಿಯಲ್ಲಿ ವಿವರಣೆ ನೀಡಿದರು.

'ಒಂದು ವೇಳೆ ಈ ವ್ಯವಸ್ಥೆಯು ವಿಫಲಗೊಂಡರೆ, ಎಲ್ಲ ಸಿಗ್ನಲ್‌ಗಳು ಅಪಾಯದ ಮುನ್ಸೂಚನೆ ನೀಡುತ್ತವೆ. ಎಲ್ಲ ರೈಲುಗಳ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತದೆ. ಇಲ್ಲಿ ವ್ಯವಸ್ಥೆಯ ವೈಫಲ್ಯ ಕಂಡುಬಂದಿಲ್ಲ. ಹೀಗಾಗಿ, ಹೊರಗಿನವರ ಹಸ್ತಕ್ಷೇಪದ ಸಾಧ್ಯತೆಯನ್ನು ಅಲ್ಲಗಳೆಯಲಾಗದು' ಎಂದು ರೈಲ್ವೆ ಮಂಡಳಿ ಸದಸ್ಯ (ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ) ಜಯವರ್ಮ ಸಿನ್ಹಾ ಹೇಳಿದರು.

                'ಕೃತಕ ಬುದ್ಧಿಮತ್ತೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ ವ್ಯವಸ್ಥೆಯಲ್ಲಿ ಉದ್ದೇಶಪೂರ್ವಕವಾಗಿ ಬದಲಾವಣೆ ಮಾಡಿರುವ ಸಾಧ್ಯತೆ ಇದೆ' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಈ ವ್ಯವಸ್ಥೆ ಅಸಮರ್ಪಕವಾಗಿ ಕಾರ್ಯ ನಿರ್ವಹಿಸಿದೆ ಎಂಬುದನ್ನೂ ಅವರು ತಳ್ಳಿಹಾಕಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries