ಕಾಸರಗೋಡು: ಮೇಲ್ಪರಂಬ ನಿವಾಸಿ, ಪರಿಸರ ಪ್ರೇಮಿ ಆಶ್ವಾಸ ವೈದ್ಯರ್ ಅವರು ಜಿಲ್ಲಾಧಿಕಾರಿ ಕಚೇರಿ ವಠಾರವನ್ನು ಔಷಧೀಯ ಸಸ್ಯಗಳ ತಾಣವನ್ನಾಗಿಸಲು ಪಣತೊಟ್ಟಿದ್ದಾರೆ. ಈ ನಿಟ್ಟಿನಲ್ಲಿ ವಿಶ್ವ ಪರಿಸರ ದಿನಾಚರಣೆ ಸಂದರ್ಭ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಶ್ವಾಸ ವೈದ್ಯರ್ ಅವರ ನೇತೃತ್ವದಲ್ಲಿ ಔಷಧೀಯ ಗಿಡಗಳನ್ನು ನೆಡಲಾಯಿತು. ಅರುಟ, ಕೂವಳಂ, ಅಲೋವೆರಾ, ಲಾವಂಚ, ಕಚೋಲಂ, ಚಂಗಲಂಪರಂಡ, ಇಳಮುಲಚಿ ಮೊದಲಾದ ಔಷಧೀಯ ಗಿಡಗಳನ್ನು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ನೆಡಲಾಯಿತು.
ಜಿಲ್ಲಾಧಿಕಾರಿ ಕೆ.ಇಭಾಶೇಖರ್ ಔಷಧೀಯ ಗಿಡಗಳನ್ನು ನೆಡುವ ಮೂಲಕ ಔಷಧೀಯ ಉದ್ಯಾನ ಉದ್ಘಾಟಿಸಿದರುನಿರ್ವಹಿಸಿದರು. ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ನೆಡಲಿರುವ ಔಷಧೀಯ ಸಸ್ಯಗಳನ್ನು ಸ್ವತ: ಆಶ್ವಾಸ ವೈದ್ಯರ್ ಅವರೇ ನೀಡಿದ್ದರು. ಸಹಾಯಕ ಜಿಲ್ಲಾಧಿಕಾರಿಗಳಾದ (ಎಲ್‍ಎ) ದಿನೇಶ್ ಕುಮಾರ್, ಸಿರೋಶ್ ಪಿ. ಜಾನ್(ಆರ್.ಆರ್) ಹುಸೂರು ಶಿರಸ್ತೇದಾರ್ ಆರ್.ರಾಜೇಶ್ ಮತ್ತಿತರರು ಭಾಗವಹಿಸಿದ್ದರು. ಆಶ್ವಾಸ ವೈದ್ಯರ್ ಅವರು ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಿಗೆ ಸ್ವಂತ ಖರ್ಚಿನೊಂದಿಗೆ ಔಷಧೀಯ ಸಸ್ಯಗಳನ್ನು ಪೂರೈಸುವುದರ ಜತೆಗೆ ಔಷಧೀಯ ಸಸ್ಯಗಳ ಮಾಹಿತಿ, ಅವುಗಳ ಬಳಕೆ ಬಗ್ಗೆ ಸಮಗ್ರ ಮಾಹಿತಿಯನ್ನೂ ಉಚಿತವಾಗಿ ನೀಡುತ್ತಿದ್ದಾರೆ.





