ಕಾಸರಗೋಡು: ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕೆ. ಇನ್ಭಾಶೇಖರ್ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡುವ ಕರ್ಯಕ್ರಮ ಹಮ್ಮಿಕೊಂಡಿದ್ದಾರೆ. ತ್ರಿಕರಿಪುರ ಗ್ರಾಮ ಪಂಚಾಯಿತಿಗೆ ಭೇಟಿನೀಡಿ ಪಂಚಾಯಿತಿಯ 21 ವಾರ್ಡ್‍ಗಳ ಸದಸ್ಯರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳು ಹಾಗೂ ಪಂಚಾಯಿತಿಯಲ್ಲಿ ನಡೆದುಬರುತ್ತಿರುವ ಅಭಿವೃದ್ಧಿಕಾರ್ಯಗಳ ಬಗ್ಗೆಮಾಹಿತಿ ಪಡೆದುಕೊಂಡರು.
ಸಿಬ್ಬಂದಿ ಕೊರತೆಯಿಂದ ಪಂಚಾಯಿತಿ ಕಾರ್ಯ ನಿರ್ವಹಣೆಗೆ ಸಮಸ್ಯೆಯಗುತ್ತಿರುವ ಬಗ್ಗೆ ಸದಸ್ಯರು ಜಿಲ್ಲಾಧಿಕಾರಿ ಗಮನಸೆಳೆದರು. ಬೀದಿ ನಾಯಿಗಳ ಹಾವಳಿ, ಹಕ್ಕುಪತ್ರ ವಿತರಣೆಯಲ್ಲಿನ ವಿಳಂಬ, ಮೀನು ಮಾರುಕಟ್ಟೆ ಅಭಿವೃದ್ಧಿ, ಲೋಕೋಪಯೋಗಿ ಇಲಾಖೆಯಿಂದ ಚರಂಡಿ ನಿರ್ಮಾಣ, ಕುಡಿಯುವ ನೀರಿನ ಕೊರತೆ, ಕಸ ವಿಲೇವಾರಿ ಸೇರಿದಂತೆ ನಾನಾ ಸಮಸ್ಯೆಗಳ ಕುರಿತು ವಾರ್ಡ್ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಗ್ರ್ರಾಪಂ ಅಧ್ಯಕ್ಷ ವಿ.ಕೆ.ಬಾವಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ವತ್ಸಲನ್ ಸ್ವಾಗತಿಸಿದರು. ಸಭೆಯಲ್ಲಿ ಪ್ರಸ್ತಾಪಿಸಲಾದ ಸಮಸ್ಯೆಗಳನ್ನು ಸ್ಥಳೀಯ ಸ್ಥಳೀಯಾಡಳಿತ ಇಲಾಖೆಯ ಜಂಟಿ ನಿರ್ದೇಶಕರಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಸಂದರ್ಭ ತ್ರಿಕರಿಪುರ ಎಬಿಸಿ ಕೇಂದ್ರ, ಮೀನು ಮಾರುಕಟ್ಟೆ, ಕುಲೇರಿ ಶಾಲೆ ಹಾಗೂ ತಂಗಯಂ ಮುಕ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಈ ಹಿಂದೆ ಬೇಡಡ್ಕ, ವಲಿಯಪರಂಬ, ಮಂಗಲ್ಪಾಡಿ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದರು.





