ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಪೈವಳಿಕೆ ಸನಿಹದ ಕೊಮ್ಮಂಗಳದ ಕಳಾಯಿ ನಿವಾಸಿ ದಿ. ನಾರಾಯಣ ನೋಂಡ ಅವರ ಪುತ್ರ ಪ್ರಭಾಕರ ನೋಂಡ(42)ಅವರ ಕೊಲೆಗೆ ಸಂಬಂಧಿಸಿ ಪ್ರಭಾಕರ ನೋಂಡ ಅವರ ಸಹೋದರ ಸೇರಿದಂತೆ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಯರಾಮ ನೋಂಡ(45), ಮೊಗ್ರಾಲ್ ಪುತ್ತೂರು ನಿವಾಸಿ ಇಸ್ಮಾಯಿಲ್(28)ಹಾಗೂ ಅಟ್ಟೆಗೋಳಿ ನಿವಾಸಿ ಖಾಲಿದ್(35)ಬಂಧಿತರು. ಪ್ರಕರಣದಲ್ಲಿ ಒಟ್ಟು ಆರು ಮಂದಿ ಆರೋಪಿಗಳಿದ್ದಾರೆ. ಕಾಸರಗೋಡು ಡಿವೈಎಸ್‍ಪಿ ಪಿ.ಕೆ ಸುಧಾಕರನ್ ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ.
ಬಂಧಿತರನ್ನು ಕೊಲೆಯಾದ ಸ್ಥಳಕ್ಕೆ ಕರೆತಂದು ಮಾಹಿತಿ ಸಂಗ್ರಹಿಸಿದ್ದಾರೆ. ಬಂಧಿತರು ಮೂರೂ ಮಂದಿ ಕೊಟೇಶನ್ ತಂಡದ ಸದಸ್ಯರಾಗಿದ್ದಾರೆ. ಸಹೋದರನ ಆಸ್ತಿ ಕಬಳಿಸಲು ಜಯರಾಮ ನೋಂಡ 10ಲಕ್ಷ ರೂ.ಗೆ ಕೊಟೇಶನ್ ನೀಡಿರುವುದಾಗಿ ಪ್ರಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಕೊಲೆಗೀಡಾಗಿರುವ ಪ್ರಭಾಕರ ನೋಂಡ, ಕನ್ಯಾಯನ ನಿವಾಸಿ ಹಾಸಿಫ್ ಎಂಬವರ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಕೊಲೆಯ ಹಿಂದೆ ಬೇರೆ ಯಾರಾದರೂ ವ್ಯಕ್ತಿಗಳ ಕೈವಾಡವಿರುವ ಬಗ್ಗೆಯೂ ತನಿಖೆ ನಡೆಯಲಿರುವುದಗಿ ಪೊಲೀಸರು ತಿಳಿಸಿದ್ದಾರೆ.
ಪ್ರಭಾಕರ ನೋಂಡ ಅವರ ಮೃತದೇಹ ಮನೆ ಸನಿಹದ ಶೆಡ್ಡಿನಲ್ಲಿ ಶನಿವಾರ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಮೃತದೇಹದಲ್ಲಿ 48ಇರಿತದ ಗಾಯಗಳಿದ್ದು, ಕತ್ತಿನ ಭಾಗದಲ್ಲಿ ಉಂಟಾದ ಗಾಯ ಸಾವಿಗೆ ಕಾರಣವಾಗಿರಬೇಕೆಂದು ಸಂಶಯಿಸಲಾಗಿದೆ. ಶವಮಹಜರು ಪರೀಕ್ಷೆ ಪರಿಯಾರಂ ವೈದ್ಯಕೀಯ ಕಾಲೇಜಲ್ಲಿ ನಡೆಸಿದ ನಂತರ ಮೃತದೇಹದ ಅಂತ್ಯ ಸಂಸ್ಕಾರ ಮನೆ ವಠಾರದಲ್ಲಿ ನಡೆಸಲಾಯಿತು.




