ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕೊಡ್ಯಮೆಯಲ್ಲಿ ಮನೆಮಂದಿ ಮಲಗಿದ್ದಂತೆ ಮನೆಯ ಇನ್ನೊಂದು ಕೊಠಡಿಯಿಂದ ದೋಚಿದ ಕಳ್ಳರು ಶೆಡ್ಡಿನಲ್ಲಿದ್ದ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಇಲ್ಲಿನ ಕೊಡ್ಯಮೆ ಉಜಾರು ನಿವಾಸಿ ಅಬೂಬಕ್ಕರ್ ಬತ್ತೇರಿ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ 10ಪವನು ಚಿನ್ನ, 25ಸಾವಿರ ರೂ. ನಗದು ದೋಚಿದ್ದಾರೆ. ಬುಧವಾರ ನಸುಕಿಗೆ ಕಳವು ಮನೆಯವರ ಗಮನಕ್ಕೆ ಬಂದಿದೆ. ನಗ, ನಗದು ದೋಚಿ ಹೊರಬಂದ ಕಳ್ಳರು ಶೆಡ್ಡಿನಲ್ಲಿರಿಸಿದ್ದ ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಅಬೂಬಕ್ಕರ್ ವಿದೇಶದಲ್ಲಿದ್ದು, ಬುಧವಾರ ಸಂಜೆ ಊರಿಗೆ ಆಗಮಿಸುವ ಮಧ್ಯೆ ಕೃತ್ಯ ನಡೆಸಲಾಗಿದೆ.
ಅಬೂಬಕ್ಕರ್ ಅವರ ಪತ್ನಿ ಜಮೀಲ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿ ವಾಸಿಸುತ್ತಿದ್ದಾರೆ. ಬುಧವಾರ ಬೆಳಗಿನ ಜಾವ 3ಕ್ಕೆ ಜಮೀಲ ಅವರ ಮಗು ಕುಡಿಯಲು ನೀರು ಕೇಳಿದ್ದು, ಈ ಸಂದರ್ಭ ಶಬ್ದಕೇಳಿ ಕೊಠಡಿ ಬಾಗಿಲು ತೆರೆದು ಹೊರಬಂದು ನೋಡಿದಾಗ ಕಪಾಟುಬಾಗಿಲು ತೆರೆದಿರಿಸಿರುವುದು ಕಂಡುಬಂದಿತ್ತು. ಹೊರಗೆ ಶೆಡ್ಡಿನಲ್ಲಿದ್ದ ಕಾರೂ ನಾಪತ್ತೆಯಾಗಿತ್ತು. ಮನೆ ಬಾಗಿಲುಗಳು ತೆಗೆದಿರಿಸಿದ ಸ್ಥಿತಿಯಲ್ಲಿತ್ತು. ಮನೆ ಮೇಲ್ಚಾವಣಿಯಿಂದ ಕಳ್ಳ ಒಳಪ್ರವೇಶಿಸಿರಬೇಕು ಅಥವಾ ಹಿಂದಿನ ದಿನವೇ ಮನೆಯೊಳಗೆ ಬಂದು ಸೇರಿಕೊಂಡಿರಬೇಕೆಂಬ ಸಂಶಯ ವ್ಯಕ್ತವಾಗಿದೆ. ಮನೆ ವಠಾರದಿಂದ ಫರ್ದಾ ಒಂದು ಪತ್ತೆಯಾಗಿದ್ದು, ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಂಬಳೆ ಠಾಣೆ ಇನ್ಸ್‍ಪೆಕ್ಟರ್ ಇ. ಅನೂಪ್ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕಾಗಮಿಸಿದ್ದು, ಬೆರಳಚ್ಚು, ಶ್ವಾನದಳ ತಂಡ ಆಗಮಿಸಿ ತಪಾಸಣೆ ನಡೆಸಿದೆ.




