HEALTH TIPS

6000 ಚದರ ಅಡಿ ಕಟ್ಟಡ ಸ್ಥಳಾಂತರಕ್ಕೆ ಸಿದ್ಧತೆ

              ಮಂಗಳೂರು: ಗುರುಪುರ ಕೈಕಂಬ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಚತುಷ್ಪಥ ವಿಸ್ತರಣೆ ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಿಯ 6000 ಚದರ ಅಡಿ ವಿಸ್ತೀರ್ಣದ ಒಂದು ಅಂತಸ್ತಿನ ವಾಣಿಜ್ಯ ಕಟ್ಟಡವನ್ನು 150 ಅಡಿ ಸ್ಥಳಾಂತರಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.

              ಹರಿಯಾಣ ಮೂಲದ ಎಚ್‌ಎಸ್‌ಬಿಎಲ್‌ ಬಿಲ್ಡಿಂಗ್‌ ಸೊಲ್ಯೂಷನ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಸ್ಥಳಾಂತರ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು, ಸ್ಥಳಾಂತರ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಎರಡು ತಿಂಗಳ ಹಿಂದೆ ವಾಮಂಜೂರಿನಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದ ಅಂಗಡಿ, ಮನೆ ಇದ್ದ ಕಟ್ಟಡವನ್ನು ಕಂಪನಿಯು ಸ್ಥಳಾಂತರಿಸಿತ್ತು. ಅಲ್ಲದೆ ಕೊಪ್ಪಳ, ಶಿರಗುಪ್ಪದಲ್ಲಿ ಯಶಸ್ವಿಯಾಗಿ ಕಟ್ಟಡ ಸ್ಥಳಾಂತರ ಕಾಮಗಾರಿ ನಡೆಸಿದೆ. ಕೇರಳದಲ್ಲೂ 4 ಕಟ್ಟಡಗಳನ್ನು ಯಶಸ್ವಿಯಾಗಿ ಸ್ಥಳಾಂತರಿಸಿದೆ ಎನ್ನುವುದು ಈ ಕಂಪನಿಯವರು ನೀಡುವ ಮಾಹಿತಿ.

ಸ್ಥಳಾಂತರಗೊಳ್ಳಲಿರುವ ಕಟ್ಟಡ ಉದ್ಯಮಿ ರಾಜೇಶ್‌ ಪೈ ಅವರಿಗೆ ಸೇರಿದೆ. ಕಟ್ಟಡದ ಒಂದು ಪಾರ್ಶ್ವ ಹೆದ್ದಾರಿ ಕಾಮಗಾರಿ ವ್ಯಾಪ್ತಿಗೆ ಒಳಪಡುವುದರಿಂದ ತೆರವುಗೊಳಿಸಬೇಕಾಗಿದೆ. ಆದರೆ ಮಾಲೀಕರು ಸಂಪೂರ್ಣ ನೆಲಸಮಗೊಳಿಸಲು ಅಥವಾ ಅರ್ಧ ಧ್ವಂಸಗೊಳಿಸಲು ಇಷ್ಟಪಡದೆ ಯಥಾಸ್ಥಿತಿಯಲ್ಲಿ ಸ್ಥಳಾಂತರಗೊಳಿಸುವ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

                'ಕಟ್ಟಡವನ್ನು 1999ರಲ್ಲಿ ನಿರ್ಮಿಸಲಾಗಿದ್ದು, ಅದು ನನ್ನ ನಿರ್ಮಾಣದ ಪ್ರಥಮ ಕಟ್ಟಡ. ಬಹಳ ಕಷ್ಟಪಟ್ಟು ನಿರ್ಮಿಸಿದ ಕಟ್ಟಡವಾಗಿದ್ದು, ಸುಧೀಂದ್ರ ಸ್ವಾಮೀಜಿ ಉದ್ಘಾಟಿಸಿದ್ದರು. ಭವಿಷ್ಯದಲ್ಲಿ ಹೆದ್ದಾರಿ ವಿಸ್ತರಣೆಗೊಳಿಸಿದರೂ ಕಟ್ಟಡಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಕಟ್ಟಡದೊಂದಿಗೆ ಇಷ್ಟೆಲ್ಲಾ ಭಾವನೆ, ನೆನಪುಗಳು ಇರುವುದರಿಂದ ಅದನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಸ್ಥಳಾಂತರಗೊಳಿಸಲು ನಿರ್ಧರಿಸಲಾಗಿದೆ' ಎಂದು ರಾಜೇಶ್‌ ಪೈ ತಿಳಿಸಿದರು.

                'ಹೊಸ ಕಟ್ಟಡ ನಿರ್ಮಿಸಲು ಬಹಳ ಖರ್ಚಾಗುತ್ತದೆ. ಆದರೆ ಅದರ ಶೇ 35ರಷ್ಟು ಮಾತ್ರವೇ ಸ್ಥಳಾಂತರಕ್ಕೆ ಖರ್ಚಾಗುತ್ತದೆ. ಸ್ಥಳಾಂತರ ಕಾಮಗಾರಿಗೆ ₹50 ಲಕ್ಷ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಕಟ್ಟಡ ಧ್ವಂಸಗೊಳಿಸಿದರೆ ಕಲ್ಲು, ಸಿಮೆಂಟ್‌, ಇಟ್ಟಿಗೆ, ಮರಳು, ಮರಮುಟ್ಟು ಸುಖಾಸುಮ್ಮನೆ ಹಾಳಾಗುತ್ತದೆ. ಇದರಿಂದ ಪರಿಸರಕ್ಕೂ ಹಾನಿ' ಎಂದು ಅವರು ಕಳಕಳಿ ವ್ಯಕ್ತಪಡಿಸಿದರು.

              'ಸ್ಥಳಾಂತರ ಕಾಮಗಾರಿ ನಡೆಸುವ ಹರಿಯಾಣದ ಎಚ್‌ಎಸ್‌ಬಿಎಲ್‌ ಕಂಪನಿ ವಿವಿಧ ಕಡೆಗಳಲ್ಲಿ ನಡೆಸಿದ ಕಾಮಗಾರಿಗಳ ಬಗ್ಗೆ ಕೇಳಿದ್ದೆ. ಆದರೆ ಸ್ಥಳಾಂತರದ ಬಗ್ಗೆ ಅಷ್ಟೊಂದು ನಂಬಿಕೆ, ಧೈರ್ಯ ಇರಲಿಲ್ಲ. ಅದಕ್ಕಾಗಿ ಸ್ವಲ್ಪ ಕಾದು ಅದೇ ಕಂಪನಿ ವಾಮಂಜೂರಿನಲ್ಲಿ ಮನೆಯೊಂದನ್ನು 30 ಅಡಿ ಸ್ಥಳಾಂತರಿಸಿದ ಕಾಮಗಾರಿ ಗಮನಿಸಿದೆ. ನಂತರ ಧೈರ್ಯದಿಂದ ಸ್ಥಳಾಂತರಗೊಳಿಸಲು ನಿರ್ಧರಿಸಿದೆ' ಎಂದು ತಿಳಿಸಿದರು.

             'ಕಟ್ಟಡ ಸ್ಥಳಾಂತರದ ಬಗ್ಗೆ ಖಾತರಿ ನೀಡಿರುವ ಕಂಪನಿ, ಕಟ್ಟಡ ಸ್ಥಳಾಂತರದ ಆದ ನಂತರ 30 ವರ್ಷ ಬಾಳಿಕೆ ಬರುತ್ತದೆ ಎಂದು ಭರವಸೆ ನೀಡಿದೆ. ಸ್ಥಳಾಂತರಗೊಂಡ 6 ತಿಂಗಳ ನಂತರ ಅದಕ್ಕೆ 2 ಅಂತಸ್ತು ಏರಿಸಬಹುದು ಎಂದು ಖಾತರಿ ನೀಡಿದೆ' ಎಂದು ತಿಳಿಸಿದರು.

               ಈ ಕಟ್ಟಡದಲ್ಲಿ ಕೆನರಾ ಬ್ಯಾಂಕ್‌ ಶಾಖೆ, ಮೆಸ್ಕಾಂ ಕಚೇರಿ, ಹಲವು ಅಂಗಡಿಗಳು ಇದ್ದವು. ಮಾಲೀಕರು ಅದರ ಹಿಂಬದಿ ಹೊಸ ಕಟ್ಟಡ ನಿರ್ಮಿಸಿದ್ದು, ಅವುಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಹೊಸ ಕಟ್ಟಡದ ಬಳಿ ಈ ಹಳೆಯ ಕಟ್ಟಡವನ್ನು ಸ್ಥಳಾಂತರಿಸಲಾಗುತ್ತಿದೆ.

                                          ಪ್ರಕ್ರಿಯೆ ಹೇಗೆ?

                    ಅಡಿಪಾಯದ ಮಣ್ಣು ತೆಗೆದು ಕಟ್ಟಡದ ಸುತ್ತ ಅಗೆದು ನೆಲದ ಅಡಿಯಿಂದ ಕಟ್ಟಡ ಆಧರಿಸಿ 500 ಜ್ಯಾಕ್‌ ಅಳವಡಿಸಲಾಗಿದೆ. ಬೀಮ್‌ ಕೆಳಗೆ ಪಿಲ್ಲರ್‌ಗಳನ್ನು ಅಳವಡಿಸಲಾಗುತ್ತದೆ. ಅಗತ್ಯವಿದ್ದ ಕಡೆ ಕೆಂಪು ಕಲ್ಲಿನಿಂದ ಭರ್ತಿ ಮಾಡಿ ಎರಡೂ ಅಂತಸ್ತುಗಳ ಭಾರ ಸಮತೋಲನಗೊಳಿಸಲಾಗುತ್ತದೆ. ಮೊದಲಿಗೆ ಕಟ್ಟಡವನ್ನು 15 ಅಡಿ ಹಿಂದಕ್ಕೆ ನಂತರ ಬಲಕ್ಕೆ 115 ಅಡಿ, ಅಲ್ಲಿಂದ ಹಿಂದಕ್ಕೆ ಹೊಸ ಕಟ್ಟಡದ ಸಮಕ್ಕೆ 15 ಅಡಿ ಸರಿಸಲಾಗುತ್ತದೆ. ಅಡಿಪಾಯವಿಲ್ಲದೆ ಉದ್ದೇಶಿತ ಜಾಗಕ್ಕೆ ಸ್ಥಳಾಂತರಿಸಿ ನಂತರ ಅಡಿಪಾಯ ಹಾಕಲಾಗುತ್ತದೆ. ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯಲಿದ್ದು, ಮೂರು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತದೆ. ದಿನಕ್ಕೆ 10 ಅಡಿಯಷ್ಟು ಸ್ಥಳಾಂತರ ಮಾಡಲು ಸಾಧ್ಯವಾಗುತ್ತದೆ. ಸ್ಥಳಾಂತರಕ್ಕೆ ಯಂತ್ರಗಳನ್ನು ಬಳಸದೆ ಸಂಪೂರ್ಣವಾಗಿ ಮಾನವ ಶ್ರಮದಿಂದಲೆ ಕಾಮಗಾರಿ ನಡೆಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries