ಕಾಸರಗೋಡು: ಕೆಪಿಸಿಸಿ ಅಧ್ಯಕ್ಷ, ಪ್ರತಿಪಕ್ಷ ಮುಖಂಡ ಸೇರಿದಂತೆ ಕಾಂಗ್ರೆಸ್ ನೇತಾರರ ವಿರುದ್ಧ ಸುಳ್ಳು ಮೊಕದ್ದಮೆ ಹೊರಿಸಿ ಅಗರನ್ನು ಜೈಲಿಗಟ್ಟುವ ಸರ್ಕಾರದ ಧೋರಣೆ ಖಂಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ ಜಿಲ್ಲಾ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಕೆಪಿಸಿಸಿ ಆಹ್ವಾನ ಮೇರೆಗೆ ರಾಜ್ಯವ್ಯಾಪಿ ಪ್ರತಿಭಟನೆಯನ್ವಯ ಕಾಸರಗೋಡಿನಲ್ಲಿ ಧರಣಿ ಆಯೋಜಿಸಲಾಗಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ, ಲಾಟಿ ಪ್ರಹಾರ ನಡೆಸಿದ್ದು, ಇದರಿಂದ ಉದ್ರಿಕ್ತರಾದ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ.
ಪೊಲೀಸರ ಲಾಟಿಪ್ರಹಾರದಿಂದ ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ಹಾಗೂ ಇತರ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಪಿ.ಕೆ ಫೈಸಲ್ ಅವರ ತಲೆಗೆ ಗಂಭೀರ ಗಾಯ ಉಂಟಾಗಿದೆ. ಇನ್ನೊಂದೆಡೆ ಕಲ್ಲು ತೂರಾಟದಿಂದ ಇಬ್ಬರು ಪೊಲೀಸರಿಗೂ ಗಾಯಗಳುಂಟಾಗಿದೆ. ಪೊಲೀಸರಾದ ಟಿ.ವಿ ರಾಹುಲ್ ಹಾಗೂ ಗೀತೇಶ್ ಕುಮಾರ್ ಗಾಯಗೊಂಡಿದ್ದಾರೆ. ಪಿ.ಕೆ ಫೈಸಲ್ ನಗರದ ಖಾಸಗಿ ಆಸ್ಪತ್ರೆಗೆ ಹಾಗೂ ಗಾಯಳು ಪೊಲೀಸರು ಜನರಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೊಲೀಸ್ ತಡೆ ಭೇದಿಸಿ ಕಾರ್ಯಕರ್ತರು ಮುಂದಕ್ಕೆ ಸಾಗಲು ಯತ್ನಿಸುತ್ತಿದ್ದಂತೆ ಪೊಲೀಸರು ಜಲಫಿರಂಗಿ ಹಾಯಿಸಿ, ಇದಕ್ಕೆ ಜಗ್ಗದಿದ್ದಾಗ ಲಾಟಿಪ್ರಹಾರ ನಡೆಸಿದ್ದಾರೆ. ಕಾರ್ಯಕರ್ತರನ್ನು ಹಿಂದಕ್ಕೆ ಸರಿಯುವಂತೆ ಮನವೊಲಿಸುತ್ತಿದ್ದ ಪಿ.ಕೆ ಫೈಸಲ್ ಅವರ ಮೇಲೆ ಪೊಲೀಸರು ಏಕಾಏಕಿ ಲಾಟಿ ಬೀಸಿದ್ದು, ಇದರಿಂದ ತಲೆಗೆ ಗಂಭೀರ ಗಾಯಗಳುಂಟಾಗಿದೆ.
ಎಸ್‍ಪಿ ಕಚೇರಿ ಎದುರು ನಡೆದ ಪ್ರತಿಭಟನಾ ಧರಣಿಯನ್ನು ಸಂಸದ ರಾಜ್‍ಮೋಹನ್ ಉನ್ಣಿತ್ತಾನ್ ಉದ್ಘಾಟಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್, ಕೆ.ಪಿ ಕುಞÂಕಣ್ಣನ್ ಸೇರಿದಂತೆ ಅನೇಕ ಮುಂಡರು ಪಾಲ್ಗೊಂಡಿದ್ದರು.
ರಸ್ತೆ ತಡೆ:
ಶಾಂತಯುತ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರ ಮೇಲೆ ಏಕಾಏಕಿ ಲಾಟಿಪ್ರಹಾರ ನಡೆಸುವ ಮೂಲಕ ಪ್ರಜಪ್ರಭುತ್ವ ವಿರೋಧಿ ನೀತಿ ತೋರಿದ ಪೊಲೀಸರ ವರ್ತನೆ ಖಂಡಿಸಿ ಕಾಂಗ್ರೆಸ್ ಕರ್ಯಕರ್ತರು ವಿದ್ಯಾನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಿರುಸಿನ ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

