ಕಾಸರಗೋಡು: ಬಿರುಸಿನ ಮಳೆಯನ್ನೂ ಲೆಕ್ಕಿಸದೆ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಮ್ಮ ಪಂಚಾಯಿತಿ ಪರ್ಯಟನೆ ಮುಂದುವರಿಸಿದರು. ಈ ಬಾರಿ ಪನತ್ತಡಿ ಪಂಚಾಯಿತಿಯ ವಿವಿಧ ಪ್ರದೆಶಗಳಿಗೆ ಭೇಟಿ ನೀಡಿ, ಅಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಗ್ರಾಮ ಪಂಚಾಯಿತಿ ಭೇಟಿ ಹಮ್ಮಿಕೊಂಡಿದ್ದಾರೆ. ಪನತ್ತಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಪ್ರಸನ್ನ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಸುರೇಶ್ ಕುಮಾರ್ ಪಂಚಾಯಿತಿಯ ಚಟುವಟಿಕೆಗಳು ಹಾಗೂ ಸಮಸ್ಯೆಗಳ ಕುರಿತು ವರದಿ ಮಂಡಿಸಿದರು. ಉಪಾಧ್ಯಕ್ಷ ಪಿ.ಎಂ.ಕುರಿಯಾಕೋಸ್ ಉಪಸ್ಥಿತರಿದ್ದರು. ಈ ಸಂದರ್ಭ ಪಂಚಾಯಿತಿಯ ಎಲ್ಲ 15 ವಾರ್ಡ್‍ಗಳ ಸದಸ್ಯರು ತಮ್ಮ ವಾರ್ಡಿನ ಕೆಲವೊಂದು ಸಮಸ್ಯೆಗಳು, ನಡೆಯಬೇಕಾಗಿರುವ ಅಗತ್ಯ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಗಳನ್ನು ಜಿಲ್ಲಾಧಿಕಾರಿಗೆ ವಿವರಿಸಿದರು.
ಪಾಣತ್ತೂರು-ಸುಳ್ಯ ರಸ್ತೆಯ ಪರಿಯಾರ ಎಂಬಲ್ಲಿ ಇತ್ತೀಚೆಗೆ ಇಂಧನ ಹೇರಿಕೊಂಡು ಸಾಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಇದರಿಂದ ಸೋರಿಕೆಯಾದ ಡೀಸೆಲ್ ಈ ಪ್ರದೇಶದ Pತೆರೆದ ಬಾವಿಗಳಿಗೆ ಸೇರ್ಪಡೆಗೊಂಡಿರುವುದರಿಂದ ನೀರು ಸೇವಿಸಲು ಅಯೋಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮನೆಗಳಿಗೆ ಕುಡಿಯುವ ನೀರು ತಲುಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಪ್ರಸ್ತುತ ಈ ಮನೆಗಳಿಗೆ ಗ್ರಾಮ ಪಂಚಾಯಿತಿ ನೀರು ಪೂರೈಸುತ್ತಿದ್ದು, ಬಾವಿಗಳನ್ನು ಶುಚೀಕರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಟ್ಯಾಂಕರ್ ಪಲ್ಟಿಯಾಗಿ ಸಂಕಷ್ಟ ಅನುಭವಿಸುತ್ತಿರುವವರಿಗೆ ಇಂಧನ ಕಂಪನಿಯಿಂದ ಪರಿಹಾರ ನೀಡಬೇಕು ಎಂದು ಪಂಚಾಯಿತಿ ಅಧಿಕಾರಿಗಳು ಆಗ್ರಹಿಸಿದ್ದಾರೆ. ಪರಿಯಾರ ಪ್ರದೇಶ ನಿರಂತರ ಅಪಘಾತ ಸಂಭವಿಸುವ ಸ್ಥಳವಾಗಿರುವ ಹಿನ್ನೆಲೆಯಲ್ಲಿ ಈ ಜಾಗದಲ್ಲಿ ಅಪಾಯ ಸೂಚಕ ಫಲಕಗಳನ್ನು ಹಾಗೂ ವೇಗ ನಿಯಂತ್ರಣ ಅಳವಡಿಸುವಂತೆ ಜಿಲ್ಲಾಧಿಕಾರಿ ಪೆÇಲೀಸರಿಗೆ ಸೂಚಿಸಿದರು. ಲೈಫ್ ಯೋಜನೆಗೆ ಸಂಬಂಧಿಸಿದ ಹಣದ ಕೊರತೆ ನೀಗಿಸಬೇಕು, ಪನತ್ತಡಿಯಲ್ಲಿ ಗ್ರಾಮಾಧಿಕಾರಿ ಕಚೇರಿ ಪ್ರಾರಂಭಿಸಬೇಕು, ವಿದ್ಯುದ್ದೀಕರಣದ ಕೊರತೆಯಿಂದ ಪ್ರಾಂದರಕಾವು ಜಿ.ಯು.ಪಿ ಶಾಲಾ ಕಟ್ಟಡ ವಿಳಂಬವಾಗುತ್ತಿದ್ದು, ಇದಕ್ಕೆ ಪರಿಹಾರ ಕಲ್ಪಿಸಬೇಕು, ಕುಟುಂಬಗಳಿಗೆ ಹಕ್ಕುಪತ್ರ ಒದಗಿಸುವಿಕೆ, ಬೀದಿ ದೀಪ ಅಳವಡಿಕೆ, ಸಾರ್ವಜನಿಕ ಶವಸಂಸ್ಕಾರಕ್ಕೆ ಜಮೀನು, ಬೀದಿ ನಾಯಿಗಳ ಉಪಟಳ, ಪರಿಶಿಷ್ಟ ಪಂಗಡದ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಪ್ರಯಾಣ ಸಮಸ್ಯೆ, ಪನತ್ತಡಿ ಬಡ್ಸ್ ಶಾಲೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ರಸ್ತೆ ನಿರ್ಮಾಣ ಸಮಸ್ಯೆಗಳ ಕುರಿತು ಸದಸ್ಯರು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದರು.
ಪಂಚಾಯಿತಿ ಕಚೇರಿಯಲ್ಲಿ ನಡೆದ ಸಭೆಯ ನಂತರ ಇಂಧನ ಟ್ಯಾಂಕರ್ ಪಲ್ಟಿಯಾದ ಪರಿಯಾರ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು. ಅಪಘಾತದ ಸಂದರ್ಭ ಸೋರಿಕೆಯಾಗಿರುವ ಡೀಸೆಲ್ ಕೆಲವೊಂದು ಬಾವಿಗಳಿಗೆ ಸೇರ್ಪಡೆಗೊಂಡಿದ್ದು, ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.


