ಕಾಸರಗೋಡು: ಸೀತಾಂಗೋಳಿ ಸಮೀಪದ ಬೇಳ ಚೌಕಾರು ಪಿಲಿಪಳ್ಳ ನಿವಾಸಿ ಕೊಳವೆ ಬಾವಿ ನಿರ್ಮಾಣದ ಗುತ್ತಿಗೆದಾರ ಥಾಮಸ್ ಕ್ರಾಸ್ತ (63) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಥಾಮಸ್ ಕ್ರಾಸ್ತ ಅವರ ನೆರೆಮನೆ ನಿವಾಸಿ ಮುನೀರ್(39)ಹಾಗೂ ಈತನ ಪತ್ನಿ ಸಹೋದರ ಚೌಕಾರು ನಿವಾಸಿ ಅಶ್ರಫ್(39)ಎಂಬವರನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೆನಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಡಿವೈಎಸ್ಪಿ ಪಿ.ಕೆ ಸುಧಾಕರನ್, ವಿದ್ಯಾನಗರ ಇನ್ಸ್‍ಪೆಕ್ಟರ್ ಪಿ. ಪ್ರಮೋದ್, ಬದಿಯಡ್ಕ ಠಾಣೆ ಎಸ್.ಐ ವಿನೋದ್‍ಕುಮಾರ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಥಾಮಸ್ ಕ್ರಾಸ್ತ ಅವರನ್ನು ತಲೆಗೆ ಕಲ್ಲು ಎತ್ತಿಹಾಕಿ ಕೊಲೆಗೈದು ಮೃತದೇಹ ಗೋಣಿಚೀಲದಲ್ಲಿ ತುಂಬಿಸಿ, ಮನೆ ಸನಿಹದ ಶೌಚಗೃಹದ ಹೊಂಡಕ್ಕೆ ಎಸೆಯಲಾಗಿತ್ತು. ಮನೆಯಲ್ಲಿನ ನಗದು, ಆಭರಣ ಕಳವುಗೈಯುವ ಉದ್ದೇಶದಿಂದ ಕೃತ್ಯವೆಸಗಲಾಗಿದೆ. ಮನೆಯಿಂದ ಕಳವುಗೈಯಲಾದ ಚಿನ್ನದಲ್ಲಿ ಅಲ್ಪ ಭಾಗ ಪತ್ತೆಹಚ್ಚಲಾಗಿದ್ದು, ಉಳಿದ ಚಿನ್ನ ಪತ್ತೆಕಾರ್ಯ ನಡೆದುಬರುತ್ತಿದೆ ಎಂದು ಎಸ್.ಪಿ ತಿಳಿಸಿದ್ದಾರೆ. ಶನಿವಾರ ಥಾಮಸ್ ಅವರ ಮೃತದೇಹ ಮನೆ ಸನಿಹದ ಶೌಚಗೃಹದ ಹೊಂಡದಲ್ಲಿ ಪತ್ತೆಯಾಗಿದೆ. ಶವಮಹಜರು ವರದಿಯಲ್ಲಿ ತಲೆಗೆ ಕಲ್ಲು ಎತ್ತಿಹಾಕಿ ಕೊಲೆನಡೆಸಿರವುದಾಗಿ ತಿಳಿಸಲಾಗಿದೆ. ಥಾಮಸ್ ಕ್ರಾಸ್ತ ಅವರ ಮನೆ ವಠಾರದಲ್ಲಿ ವಾಸಿಸುತ್ತಿರುವ ಇತರ ರಾಜ್ಯ ಕಾರ್ಮಿಕರನ್ನು ಕೇಂದ್ರೀಕರಿಸಿ ತನಿಖೆ ನಡೆಸುವ ಮಧ್ಯೆ ಅರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಸಾಧ್ಯವಾಗಿದೆ.


