ಕಾಸರಗೋಡು : ತಲಪಾಡಿಯಿಂದ ನೀಲೇಶ್ವರದ ತನಕ ಇರುವ ಎರಡು ರೀಚ್‍ಗಳ ರಾಷ್ಟ್ರೀಯ ಹೆದ್ದಾರಿ ಷಟ್ಪಥ ಯೋಜನೆ ಕಾಮಗಾರಿಯು ಸ್ಥಳೀಯವಾಗಿ ಕೆಲವೆಡೆ ಸಂಚಾರ ಸಮಸ್ಯೆ ತಂದೊಡ್ಡುತ್ತಿದ್ದು, ಇದರ ಬಗ್ಗೆ ಸಂಬಂಧಪಟ್ಟವರು ಅಗತ್ಯ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಹೆದ್ದಾರಿ ನಿರ್ಮಾಣದಲ್ಲಿರುವ ಅಡೆತಡೆಗಳನ್ನು ತಕ್ಷಣ ನಿವಾರಿಸಲು ಅಧಿಕಾರಿಗಳು ಮುಂದಾಗ ಬೇಕು ಎಂದು ಪಿಡಿಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಆಸಾದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪವರ್ ಹೈವೇ ನಿರ್ಮಾಣಕ್ಕಾಗಿ ಭೂಮಿ ವಶಪಡಿಸುವ ಸಂದರ್ಭ ಭೂಮಿಯ ನ್ಯಾಯ ಬೆಲೆ ನೀಡಬೇಕು. ತಪ್ಪಿದಲ್ಲಿ ಜಿಲ್ಲೆಯಲ್ಲಿ ಜನಕೀಯ ಹೋರಾಟಕ್ಕೆ ಪಕ್ಷ ಮುಂದಾಗಲಿದೆ. ಮಂಜೇಶ್ವರ, ಉಪ್ಪಳ ಕೈಕಂಬ, ಮೊಗ್ರಾಲ್ ಪುತ್ತೂರು, ನಾಯಮ್ಮಾರ್‍ಮೂಲೆ, ಬೇವಿಂಜ ತೆಕ್ಕಿಲ್ ಬಾಗದ ಜನರು ಅಂಡರ್‍ಪಾಸ್ ನಿರ್ಮಾಣ ವಿಷಯದಲ್ಲಿ ಆತಂಕದಲ್ಲಿದ್ದಾರೆ. ಜನ ಪ್ರತಿನಿಧಿಗಳು ಇದು ವರೆಗೆ ಡಿಪಿಆರ್ ಲಭಿಸದೆ ಅಲೆದಾಡುತ್ತಿದ್ದು, ಉಭಯ ಸರಕಾರಗಳು ಜನರ ಆತಂಕ ನಿವಾರಿಸಿ ಜನತೆಗೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೂಡಲೇ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪಿಡಿಪಿ ಮಖಂಡರಾದ ಎಸ್ ಎಂ ಬಶೀರ್ ಅಹಮದ್ ಮಂಜೇಶ್ವರ, ಯೂನಸ್ ತಳಂಗರೆ, ಕೆಪಿ ಮುಹಮ್ಮದ್. ಫಾರೂಕ್ ತಙಳ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು

