ಕಾಸರಗೋಡು: ಸ್ವಾತಂತ್ರ್ಯದ ಆಜಾದಿಕಾ ಅಮೃತ ಮಹೋತ್ಸವ 75ನೇ ವಾರ್ಷಿಕೋತ್ಸವದ ಅಂಗವಾಗಿ 'ಮೇರಿ ಮಿಟ್ಟಿ ಮೇರಾ ದೇಶ್'- ನನ್ನ ಮಣ್ಣು ನನ್ನ ದೇಶ ಎಂಬ ಸಮಗ್ರ ಕಾರ್ಯಕ್ರಮ ಆ. 9ರಿಂದ 30ರವರೆಗೆ ನಡೆಯಲಿದೆ.
ಕೇಂದ್ರ, ರಾಜ್ಯ ಸರ್ಕಾರಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಮಿಲಿಟರಿ ಅರೆಸೇನಾ ಘಟಕಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಸ್ವಯಂಸೇವಾ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತದೆ. ಈ ಸಂದರ್ಭ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತು ದೇಶದ ಭದ್ರತೆಗಾಗಿ ಪ್ರಾಣ ತೆತ್ತವರನ್ನು ಸ್ಮರಿಸಲು 75 ರೀತಿಯ ಸಸಿಗಳನ್ನು ನೆಡಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಾತಂತ್ರ್ಯ ಹೋರಾಟಗಾರರು ದೇಶ ರಕ್ಷಣೆಗಾಗಿ ವೀರಮರಣ ಹೊಂದಿದವರ ಸ್ತೂಪದ ಬಳಿ ಅಥವಾ ಪಂಚಾಯಿತಿ ನಿರ್ಧರಿಸಿದ ಸ್ಥಳದಲ್ಲಿ ಸೈನಿಕರು ಮತ್ತು ಸೇವೆ ಸಲ್ಲಿಸಿದ ಅರೆ ಸೈನಿಕರ ಸ್ಮಾರಕವಾಗಿ ಶಿಲಾ ಫಲಕವನ್ನು ನಿರ್ಮಿಸಲಾಗುವುದು. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳು ಮತ್ತು ದೇಶದ ಭದ್ರತೆಗಾಗಿ ಶ್ರಮಿಸಿದ ಮಿಲಿಟರಿ ಮತ್ತು ಅರೆ ಮಿಲಿಟರಿ ಸಿಬ್ಬಂದಿಯನ್ನು ಪಂಚಾಯಿತಿ ನೇತೃತ್ವದಲ್ಲಿ ಸನ್ಮಾನಿಸಲಾಗುವುದು, ಜತೆಗೆ ರಾಷ್ಟ್ರಧ್ವಜಾರೋಹಣ ನಡೆಯಲಿದೆ. ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ರಾಜ್ಯ ಯುವ ಕಲ್ಯಾಣ ಮಂಡಳಿ, ಸ್ವಯಂಸೇವಕರು, ಉದ್ಯೋಗ ಖಾತ್ರಿ ನೌಕರರು, ಕುಟುಂಬಶ್ರೀ ಕಾರ್ಯಕರ್ತರು ಮತ್ತು ಇತರ ಸ್ವಯಂಸೇವಾ ಸಂಸ್ಥೆಗಳ ಕಾರ್ಯಕರ್ತರ ಭಾಗವಹಿಸುವಿಕೆಯೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸ್ವಾತಂತ್ರ್ಯ ದಿನದಂದು ಎಲ್ಲಾ ಸಂಸ್ಥೆಗಳು ಮತ್ತು ಮನೆಗಳಲ್ಲಿ ರಾಷ್ಟ್ರಧ್ವಜಾರೋಹಣ ನಡೆಯಲಿದೆ.
ಇಂದು ಜಿಲ್ಲಾಧಿಕಾರಿ ಉದ್ಘಾಟನೆ:
'ಮೇರಿ ಮಿಟ್ಟಿ ಮೇರಾ ದೇಶ್'ಕಾರ್ಯಕ್ರಮವನ್ನು ಆ. 9ರಂದು ಬೆಳಗ್ಗೆ 8.30ಕ್ಕೆ ಮಂಜೇಶ್ವರ ಪುತ್ತಿಗೆ ಅನೋಡಿಪಳ್ಳದ ವಠಾರದಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಉದ್ಘಾಟಿಸುವರು. ವೀರಯೋಧರಿಗೆ ನಮನ ಎಂಬ ಸಂದೇಶದೊಂದಿಗೆ ಭೂಮಿಗೆ ನಮಿಸುವ ಕಾರ್ಯಕ್ರಮ ನಡೆಸಲಾಗುವುದು. ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಸರಗೋಡು, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದೆ.


