ಕುಂಬಳೆ: ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಅವರು ಪುತ್ತಿಗೆ ಪಂಚಾಯಿತಿಯ ಸಮಸ್ಯೆಗಳನ್ನು ಕಂಡು ಆಲಿಸಿದರು. ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿಗಳು ನಡೆಸಿದ ಪಂಚಾಯತಿ ಭೇಟಿಯ ಅಂಗವಾಗಿ ಪುತ್ತಿಗೆ ಪಂಚಾಯತಿಗೆ ಆಗಮಿಸಿದ್ದರು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ ಆಳ್ವ, ಉಪಾಧ್ಯಕ್ಷೆ ಜಯಂತಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಹಸಿರು ಕ್ರಿಯಾ ಸೇನೆಯ ತಾಂತ್ರಿಕ ತಜ್ಞರು, ಸದಸ್ಯರು ಭಾಗವಹಿಸಿದ್ದರು.
ವಾರ್ಡ್ ಗಳಲ್ಲಿ ಅನುಷ್ಠಾನಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಜನಪ್ರತಿನಿಧಿಗಳು ಚರ್ಚಿಸಿದರು. ಅಧಿಕಾರಿಗಳು ಇಲಾಖಾ ಮಟ್ಟದಲ್ಲಿ ಕೈಗೊಂಡಿರುವ ಚಟುವಟಿಕೆಗಳನ್ನು ವಿವರಿಸಿದರು. ಹಸಿರು ಕ್ರಿಯಾ ಸೇನೆಯ ಕಾರ್ಯಚಟುವಟಿಕೆಗಳು ಹಾಗೂ ಪುತ್ತಿಗೆ ಗ್ರಾ.ಪಂ.ನಲ್ಲಿ ಹಸಿರು ಕ್ರಿಯಾ ಸೇನೆ ಸಹಾಯ ಸಂಸ್ಥೆ ಕಾರ್ಯಾರಂಭ ಮಾಡಿದ ನಂತರ ನಡೆಯುತ್ತಿರುವ ಚಟುವಟಿಕೆಗಳ ಕುರಿತು ವಿವರಿಸಿದರು.
ಪಂಚಾಯಿತಿಯಲ್ಲಿ ಪರಿಶೀಲನಾ ಸಭೆಯ ನಂತರ ಜಿಲ್ಲಾಧಿಕಾರಿ ಹದಿನಾಲ್ಕನೇ ವಾರ್ಡ್‍ನ ಅಂಗಡಿಮೊಗರು ಪರಿಶಿಷ್ಟ ಪಂಗಡದ ಕೊರಗ ಕಾಲೋನಿಗೆ ಭೇಟಿ ನೀಡಿದರು. ಕಾಲೋನಿಯಲ್ಲಿನ ವಾಸಸ್ಥಳವನ್ನು ವೀಕ್ಷಿಸಿ ಮನವರಿಕೆ ಮಾಡಿದ ಜಿಲ್ಲಾಧಿಕಾರಿ, ಮನೆಗಳ ಪುನಶ್ಚೇತನ ಹಾಗೂ ಸುತ್ತುಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಜಿಲ್ಲಾಧಿಕಾರಿಗಳು ಅನೋಡಿಪಳ್ಳ ಜಲಾಶಯ ಪ್ರದೇಶಕ್ಕೆ ಭೇಟಿ ನೀಡಿ ಆ ಪ್ರದೇಶದ ಪ್ರವಾಸೋದ್ಯಮ ಸಾಮಥ್ರ್ಯವನ್ನು ಅರಿತುಕೊಂಡರು. ಪ್ರವಾಸೋದ್ಯಮಕ್ಕೆ ಯೋಗ್ಯವಾದ ಪ್ರದೇಶ ಇದಾಗಿದ್ದು, ಕ್ಷೇತ್ರಕ್ಕೆ ಸೂಕ್ತ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

.jpeg)
.jpeg)
