ಕಾಸರಗೋಡು: ಸಿಬಿಸಿ ಯೋಜನೆಯನ್ವಯ ಸಾಲ ಪಡೆದು, ಪಾವತಿಸಲಾಗದ ಸುಸ್ತಿದಾರರಿಗೆ ಒನ್-ಟೈಮ್ ಸೆಟಲ್ಮೆಂಟ್ ಸ್ಕೀಮ್ ಮೂಲಕ ಸಾಲ ಪರಿಹಾರವನ್ನು ನೀಡಲಾಗುವುದು ಎಂದು ಖಾದಿ ಮಂಡಳಿ ಉಪಾಧ್ಯಕ್ಷ ಪಿ. ಜಯರಾಜನ್ ತಿಳಿಸಿದರು.
ಅವರು ಕಾಞಂಗಾಡು ಖಾದಿ ಸೌಭಾಗ್ಯದಲ್ಲಿ ಜಿಲ್ಲಾ ಖಾದಿ ಗ್ರಾಮೋದ್ಯೋಗ ಓಣಂ ಮೇಳದ ಜಿಲ್ಲಾ ಮಟ್ಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಿಬಿಸಿ ಯೋಜನೆಯ ಮೂಲಕ ಸಾಲ ಸುಸ್ತಿದಾರರು ಯೋಜನೆಯ ಮೂಲಕ ಪರಿಹಾರವನ್ನು ಪಡೆದುಕೊಳ್ಳಬಹುದಗಿದೆ. ಇದಕ್ಕಾಗಿ ರಾಜ್ಯ ಮಟ್ಟದಲ್ಲಿ ಅದಾಲತ್ ನಡೆಸಿ, ಏಕಜಾಲದ ಮೂಲಕ ಪರಿಹಾರ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಕಳೆದ ವರ್ಷ ಖಾದಿ ಮಂಡಳಿಗೆ ಓಣಂ ದಿನದಂದು 60 ಕೋಟಿ ರೂ. ಮೊತ್ತದ ಮಾರಾಟ ನಡೆಸಲಾಗಿದೆ. ಈ ಬಾರಿ 150 ಕೋಟಿ ರೂ. ಮೊತ್ತದ ಮಾರಾಟ ಗುರಿ ಇದೆ. ಎಲ್ಲಾ ವಯಸ್ಸಿನವರಿಗೆ ಅನುಕೂಲವಾಗುವ ರೀತಿಯ ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗುತ್ತದೆ. ಹೊಸ ಪೀಳಿಗೆಯ ಆದ್ಯತೆಯ ಬಟ್ಟೆಗಳು ಈಗ ಖಾದಿ ವಲಯದಲ್ಲಿಯೂ ಲಭ್ಯವಿವೆ. 'ಓಣಂಗೆ ಒಂದು ಖಾದಿ ವಸ್ತ್ರ'ಎಂಬ ಸಂದೇಶವನ್ನು ಎಲ್ಲರೂ ಕಾರ್ಯಗತಗೊಳಿಸಬೇಕು ಎಂದು ತಿಳಿಸಿದರು.
ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಬಿಲ್ ಟೆಕ್ ಅಬ್ದುಲ್ಲಾ ಮೊದಲ ಮಾರಾಟ ನಡೆಸಿದರು. ಎಂ.ಕೆ.ವಿನೋದ್ ಕುಮಾರ್ ಸ್ವೀಕರಿಸಿ, ನಗರಸಭೆ ಕೌನ್ಸಿಲರ್ ಪಿ.ಶೋಭಾ ಬಹುಮಾನದ ಕೂಪನ್ ವಿತರಿಸಿದರು. ನಗರಸಭಾ ಸದಸ್ಯರಾದ ವಿ.ವಿ.ರಮೇಶನ್, ಕೆ.ಕೆ.ಬಾಬು, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ವಿವಿಧ ರಾಜಕೀಯ ಪಕ್ಷದ ಮುಖಂಡರು, ಖಾದಿ ಮಂಡಳಿ ನಿರ್ದೇಶಕರು ಪಾಲ್ಗೊಂಡಿದ್ದರು. ಪಯ್ಯನ್ನೂರು ಖಾದಿ ಕೇಂದ್ರದ ನಿರ್ದೇಶಕ ಕೆ.ವಿ.ರಾಜೇಶ್ ಸ್ವಾಗತಿಸಿದರು. ಜಿಲ್ಲಾ ಯೋಜನಾಧಿಕಾರಿ ಎಂ.ಆಯಿಷಾ ವಂದಿಸಿದರು.





