ಕಾಸರಗೋಡು: ಉತ್ತರ ಮಲಬಾರ್ ರೈಲ್ವೆ ವಲಯವನ್ನು ನಿರ್ಲಕ್ಷಿಸುತ್ತಿರುವುದರಿಂದ ಕಾಸರಗೋಡಿನ ರೈಲು ಪ್ರಯಾಣಿಕರು ಹೆಚ್ಚಿನ ಸಂಕಷ್ಟ ಅನುಭವಿಸುತ್ತಿದ್ದು, ಈ ಸಮಸ್ಯೆ ಪರಿಹರಿಸಲು ರೈಲ್ವೆ ಇಲಾಖೆ ಮುಂದಾಗಬೇಕು ಎಂದು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಕೇಂದ್ರ ರೈಲ್ವೆ ಖಾತೆ ಸಚಿವರನ್ನು ಆಗ್ರಹಿಸಿದ್ದಾರೆ.
ಈ ಪ್ರದೇಶಕ್ಕೆ ಬರುವ ಹೆಚ್ಚಿನ ರೈಲುಗಳು ಕಣ್ಣೂರಿನಲ್ಲಿ ಯಾನ ಕೊನೆಗೊಳಿಸುತ್ತಿದೆ. ಕೊಂಕಣ ರೈಲುಗಳಿಗೆ ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಯಿಲ್ಲದಿರುವುದು ಮತ್ತು ಸಾಮಾನ್ಯ ಬೋಗಿಗಳ ಕೊರತೆಯಿಂದಾಗಿ ಜಿಲ್ಲೆಯ ಜನತೆ ವರ್ಷಗಳಿಂದ ರೈಲು ಪ್ರಯಾಣದ ಸಮಸ್ಯೆ ಅನುಭವಿಸಬೇಕಾಗುತ್ತಿದೆ. ಜಿಲ್ಲೆಯ ಜನತೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹರ ಕಂಡುಕೊಳ್ಳುವಂತೆ ರೈಲ್ವೆ ಸಚಿವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿರುವುದಾಗಿ ಸಂಸದ ರಾಜಮೋಹನ್ ಉಣ್ಣಿತ್ತಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಣ್ಣೂರು ಮತ್ತು ಮಂಗಳೂರು ನಡುವೆ ಸಂಚರಿಸುವ ಕೆಲವು ರೈಲುಗಳಲ್ಲಿ ಮಂಜೂರು ಮಾಡಲಾದ 2ಡಿ ಮೀಸಲು ಕೋಚ್‍ಗಳಲ್ಲಿ ಒಂದನ್ನು ಸೆಪ್ಟೆಂಬರ್‍ನಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ, ಇದರಿಂದ ಸಮಸ್ಯೆ ಮತ್ತಷ್ಟು ಜಟಿಲಗೊಳ್ಳುವ ಬಗ್ಗೆ ಸಚಿವರಿಗೆ ಮನವರಿಕೆ ಮಾಡಲಾಗಿದೆ.
ಕಾಞಂಗಾಡ್, ಚೆರುವತ್ತೂರು, ಪಯ್ಯನ್ನೂರ್, ಪಯಂಗಡಿ ಮತ್ತು ಕಣ್ಣಾಪುರಂನಂತಹ ನಿಲ್ದಾಣಗಳಲ್ಲಿ ಕೋವಿಡ್ ಸಾಂಕ್ರಾಮಿಕ ಕಾಲಾವಧಿಯಲ್ಲಿ ಹಿಂತೆಗೆದುಕೊಳ್ಳಲಾಗಿದ್ದ ರೈಲುಗಳ ನಿಲುಗಡೆಯನ್ನು ಮರುಸ್ಥಾಪಿಸಬೇಕು ಅದೇ ರೀತಿ ಹೆಚ್ಚಿನ ಆದಾಯ ಹೊಂದಿರುವ ಚೆರುವತ್ತೂರು, ಪಯಂಗಡಿ ಮತ್ತು ಮಂಜೇಶ್ವರಂನಲ್ಲಿ ಹೊಸ ನಿಲುಗಡೆ ಒದಗಿಸಿಕೊಡುವಂತೆಯೂ ಆಗ್ರಹಿಸಿರುವುದಾಗಿ ಸಂಸದರ ಪ್ರಕಟಣೆ ತಿಳಿಸಿದೆ.





