ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ತೃತೀಯ ಚಾತುರ್ಮಾಸ್ಯದ ಅಂಗವಾಗಿ ವರಮಹಾಲಕ್ಷ್ಮೀ ಹಬ್ಬದ ವಿಶೇಷ ಕಾರ್ಯಕ್ರಮವಾಗಿ ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಅವರ ಸಪ್ತತಿ ಸನ್ಮಾನ ಸಮಾರಂಭ ಶ್ರೀಮಠದಲ್ಲಿ ಆಯೋಜಿಸಲಾಗಿದೆ.
ಅಪರಾಹ್ನ 2.30 ಕ್ಕೆ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸುವರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಡಾ.ಟಿ.ಶಾಮ ಭಟ್ ಮುಖ್ಯ ಅರ್ಭಯಾಗತರಾಗಿ ಉಪಸ್ಥಿತರಿರುವರು. ಡಾ.ಎಂ.ಪ್ರಭಾಕರ ಜೋಶಿ ಶುಭಾಶಂಸನೆಗೈಯ್ಯುವರು.
ಸಂಜೆ 4 ರಿಂದ ಯಜ್ಞೇಶ ಆಚಾರ್ಯ ಸುಬ್ರಹ್ಮಣ್ಯ ಅವರಿಂದ ದಾಸವಾಣಿ ಪ್ರಸ್ತುತಗೊಳ್ಳಲಿದೆ. ಸತ್ಯನಾರಾಯಣ ಐಲ(ಹಾರ್ಮೋನಿಯಂ), ಲವಕುಮಾರ ಐಲ(ತಬಲಾ), ಸುಹಾಸ್ ಹೆಬ್ಬಾರ್ ಮಾಣಿಲ(ರಿದಂ ಪ್ಯಾಡ್)ನಲ್ಲಿ ಸಾಥ್ ನೀಡುವರು.
ಬಳಿಕ 6.30 ರಿಂದ ಗುರುದಕ್ಷಿಣೆ ಆಖ್ಯಾಯಿಕೆಯ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ದಿನೇಶ್ ಅಮ್ಮಣ್ಣಾಯ, ಪುತ್ತಿಗೆ ರಘುರಾಮ ಹೊಳ್ಳ(ಭಾಗವತಿಕೆ), ದೇಲಂತಮಜಲು ಸುಬ್ರಹ್ಮಣ್ಯ ಭಟ್(ಚೆಂಡೆ), ಲವಕುಮಾರ ಐಳ(ಮೃದಂಗ), ನಿಶ್ಚಿತ್ ಜೋಗಿ(ಚಕ್ರತಾಳ) ಹಾಗೂ ಮುಮ್ಮೇಳದಲ್ಲಿ ಗಣೇಶ್ ಪಾಲೆಚ್ಚಾರ್, ರವಿರಾಜ ಪನೆಯಾಲ, ಪೂಕಳ ಲಕ್ಷ್ಮೀನಾರಾಯಣ ಭಟ್, ಸಂಜಯಕುಮಾರ್ ಗೋಣಿಬೀಡು, ಲಕ್ಷ್ಮಣಕುಮಾರ ಮರಕಡ, ಶಶಿಧರ ಕುಲಾಲ್ ಕನ್ಯಾನ, ದಿನೇಶ್ ಕೋಡಪದವು, ಶಂಭಯ್ಯ ಭಟ್ ಕಂಜರ್ಪಣೆ ಭಾಗವಹಿಸುವರು.





