ಕಾಸರಗೋಡು: ಅನುಭವವನ್ನು ಅಭಿವ್ಯಕ್ತಿಸುವ ಕಲೆ ಸಿದ್ಧಿಸಿದವರು ಮಾತ್ರ ಸಾಹಿತಿ ಎನಿಸಿಕೊಳ್ಳಲು ಸಾಧ್ಯ ಎಂಬುದಾಗಿ ಖ್ಯಾತ ಸಂಶೋಧಕ, ಅನುವಾದಕ ಡಾ. ಮೋಹನ ಕುಂಟಾರ್ ತಿಳಿಸಿದ್ದಾರೆ. ಅವರು ಬೆಂಗಳೂರಿನ ವೀರಲೋಕ ದೇಸೀ ಜಗಲಿ ಬಳಗ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಆಶ್ರಯದಲ್ಲಿ ಬಾಯಿಕಟ್ಟೆಯ ಶ್ರೀಲಕ್ಷ್ಮೀ ಮಿಲ್ಸ್ ಸಭಾ ಭವನದಲ್ಲಿ ನಡೆದ ಕಥಾ ಕಮ್ಮಟದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಸಾಹಿತ್ಯದ ಬರವಣಿಗೆಗೆ ತೆರೆದ ಸಮಾಜವೇ ಪಠ್ಯ. ಬದುಕಿನ ಗೊಂದಲಗಳ ನಡುವೆ ಹುಟ್ಟುವ ತೀಕ್ಷ್ಣ ಸ್ವಭಾವ ಬರಹಗಾರರನ್ನು ಸೃಷ್ಟಿಸುತ್ತದೆ. ಮನುಷ್ಯ ಮನಸ್ಸಿನ ಮೂಲ ರಾಗ ಭಾವಗಳನ್ನು ಹೊಂದಿದ ಸಾಹಿತ್ಯ ಎಂದಿಗೂ ಜೀವಂತವಾಗಿರುತ್ತದೆ ಎಂದು ತಿಳಿಸಿದರು.
ಖ್ಯಾತ ಲೇಖಕಿ ಡಾ. ಪ್ರಮೀಳ ಮಾಧವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಲೇಖಕನಾದವನಿಗೆ ಪ್ರತಿಭೆಯ ಕಣ್ಣಿರಬೇಕು. ಸಾಹಿತ್ಯವು ಹಿತ ಹಾಗೂ ಸಂಸ್ಕಾರ ಭರಿತವಾಗಿದ್ದು, ಸದಾ ಹೊಸತನ್ನು ಕಾಣುವ, ಹೊಸತನ್ನು ಕಟ್ಟುವ ಕಲೆಯನ್ನು ಹೊಂದಿರಬೇಕು ಎಂದು ತಿಳಿಸಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿಂತನೆಗೆ ಹಚ್ಚುವ, ವೈಚಾರಿಕ ನೆಲೆಗಟ್ಟಿನಲ್ಲಿ ಸಮಕಾಲೀನ ಸ್ಥಿತಿಗತಿಗಳಿಗೆ ಕನ್ನಡಿಯನ್ನು ಹಿಡಿಯುವ ಹಾಗೂ ಜನ ಸಾಮಾನ್ಯರ ಬದುಕಿಗೆ ಸ್ಪಂದಿಸುವ ರೀತಿಯ ಸಾಹಿತ್ಯ ಸಮಾಜಕ್ಕೆ ಹೆಚ್ಚು ಆಪ್ತವಾಗಿರುತ್ತದೆ ಎಂದು ತಿಳಿಸಿದರು.
ಎಸ್. ಎಲ್. ಮಂಜುನಾಥ್ ಬೆಂಗಳೂರು, ಸುಂದರ ಬಾರಡ್ಕ, ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ ಬಂಗೇರ ಉಪಸ್ಥಿತರಿದ್ದರು.ಶಿಬಿರಾರ್ಥಿಗಳು ತಾವು ಬರೆದ ಕತೆಗಳನ್ನು ಓದಿದರು. ಡಾ. ಎಸ್. ಎಲ್. ಮಂಜುನಾಥ್ ಸಂವದಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಕತೆಗಳನ್ನು ಕೂಲಂಕಷವಾಗಿ ವಿಮರ್ಶಿಸಿ, ಪ್ರೀತಿ ಪ್ರೇಮ ಪ್ರಣಯ ಮತ್ತು ಕೇವಲ ಕಾಲ್ಪನಿಕ ವಿಚಾರಗಳಲ್ಲಿ ಲೀನವಾಗದೆ ಆಧುನಿಕ ಸಮಾಜವು ಎದುರಿಸುವ ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುವ, ಸಮಕಾಲೀನ ತಲ್ಲಣಗಳನ್ನು ಸಂಕೀರ್ಣವಾಗಿ ಅಭಿವ್ಯಕ್ತಿಸುವ ಕತೆಗಳನ್ನು ರಚಿಸುವ ಮೂಲಕ ಶಿಬಿರಾರ್ಥಿಗಳು ಪ್ರಾಯಕ್ಕೆ ಮೀರಿದ ಪ್ರಬುದ್ಧತೆ ಮತ್ತು ಪ್ರೌಢಿಮೆಯನ್ನು ವ್ಯಕ್ತ ಪಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಶಿವಮೊಗ್ಗ ಕರ್ನಾಟಕ ಸಂಘದ ಕಥಾ ಪ್ರಶಸ್ತಿ ವಿಜೇತ ಕತೆಗಾರ್ತಿ ಸ್ನೇಹಲತಾ ದಿವಾಕರ್ ಸಂವಾದದಲ್ಲಿ ಪಾಲ್ಗೊಂಡಿದ್ದರು. ಶಿಬಿರಾರ್ಥಿಗಳು ಕಮ್ಮಟದ ಬಗ್ಗೆ ಅಭಿಪ್ರಾಯಗಳನ್ನು ಮಂಡಿಸಿದರು. ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯಾಧ್ಯಕ್ಷ ಹಿರಿಯ ಸಾಹಿತಿ ಪೆÇ್ರ. ಪಿ. ಎನ್. ಮೂಡಿತ್ತಾಯ ಸಮಾರೋಪದ ನುಡಿಗಳನ್ನಾಡಿದರು. ಜಿಲ್ಲಾ ಸಂಚಾಲಕ ಡಾ. ಸುಭಾಷ್ ಪಟ್ಟಾಜೆ ಸ್ವಾಗತಿಸಿ ವಂದಿಸಿದರು.


