ಕಾಸರಗೋಡು: ಉಪ್ಪಳದ ಹಿದಾಯತ್‍ನಗರದಲ್ಲಿ ಗಸ್ತಿನಲ್ಲಿದ್ದ ಮಂಜೇಶ್ವರ ಠಾಣೆ ಎಸ್.ಐ ನೇತೃತ್ವದ ಪೊಲೀಸರ ತಂಡವನ್ನು ಥಳಿಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಂಲೀಗ್ ಮುಖಂಡ, ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಗೋಲ್ಡನ್ ಅಬ್ದುಲ್ ರಹಮಾನ್‍ನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋಲ್ಡನ್ ಅಬ್ದುಲ್‍ರಹಮಾನ್ ಅವರನ್ನು ವಶಕ್ಕೆ ತೆಗೆದುಕೊಂಡು, ವೈದ್ಯಕೀಯ ತಪಾಸಣೆಗೊಳಪಡಿಸಿದ ನಂತರ ನ್ಯಾಐಆಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಇವರಿಗೆ ನ್ಯಾಯಾಂಗಬಂಧನ ವಿಧಿಸಿದೆ. ಪ್ರಕರಣದಲ್ಲಿ ಗೋಲ್ಡನ್ ಅಬ್ದುಲ್ ರಹಮಾನ್, ರಶೀದ್, ಅಫ್ಸಲ್ ಸೇರಿದಂತೆ ಐದು ಮಂದಿ ಆರೋಪಿಗಳಿದ್ದು, ಇತರರು ತಲೆಮರೆಸಿಕೊಂಡಿದ್ದಾರೆ. ಗೋಲ್ಡನ್ ಅಬ್ದುಲ್‍ರಹಮಾನ್ ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಸಮಿತಿ ಕಾರ್ಯದರ್ಶೀಯಾಗಿದ್ದಾರೆ.
ಭಾನುವಾರ ಮಧ್ಯರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಹಿದಾಯತ್‍ನಗರದ ಅಂಗಡಿ ಎದುರು ಜನರು ಗುಂಪುಸೇರಿರುವುದನ್ನು ಪ್ರಶ್ನಿಸಲು ಜೀಪು ನಿಲ್ಲಿಸಿ ಸನಿಹ ತೆರಳುತ್ತಿದ್ದಂತೆ ತಂಡದಲ್ಲಿದ್ದ ಕೆಲವರು ಸುತ್ತುವರಿದು ಹಲ್ಲೆ ನಡೆಸಿದ್ದಾರೆ. ಇದರಿಂದ ಎಸ್.ಐ ಅನೂಪ್ ಅವರ ಬಲದ ಕೈಗೆ ಗಂಭೀರ ಏಟು ಬಿದ್ದಿದ್ದು, ಇವರನ್ನು ಸನಿಹದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೀನಿಯರ್ ಪೊಲೀಸ್ ಅಧಿಕಾರಿ ಕಿಶೋರ್ ಅವರಿಗೂ ಗಾಯಗಳುಂಟಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರ ವಿರುದ್ಧ ಜಾಮೀನುರಹಿತ ಕೇಸು ದಾಖಲಿಸಿಕೊಂಡಿದ್ದರು.
ವರ್ಷಗಳ ಹಿಂದೆ ಉಪ್ಪಳ ಆಸುಪಾಸು, ಪೊಲೀಸರನ್ನು ಸ್ಥಳಕ್ಕೆ ಕರೆಸಿ ಎಸ್.ಐ ಸೇರಿದಂತೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಯೂ ನಡೆದಿತ್ತು.