ಕುಂಬಳೆ: ಗ್ರಾಮೀಣ ಪ್ರದೇಶದ ಪ್ರಯಾಣ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಂಗವಾಗಿ ಕುಂಬಳೆ ಗ್ರಾಮ ಪಂಚಾಯತಿ ವತಿಯಿಂದ ಕೆ.ಎಸ್.ಆರ್.ಟಿ.ಸಿ. ಸಹಯೋಗದೊಂದಿಗೆ ಗ್ರಾಮ ಬಂಡಿ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕುಂಬಳೆ ಗ್ರಾಮ ಪಂಚಾಯತಿ ಆಡಳಿತ ಸಮಿತಿ ಸದಸ್ಯರು ಮಂಗಳವಾರ ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ವಿಸ್ಕøತ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಮ ಬಂಡಿ ಯೋಜನೆಯಡಿ ಗ್ರಾಮ ಪಂಚಾಯತಿ ಮತ್ತು ಸಾರಿಗೆ ಸಂಸ್ಥೆಯು ಸಾರ್ವಜನಿಕ ಸಾರಿಗೆ ಸೌಲಭ್ಯಗಳು ಅಸಮರ್ಪಕವಾಗಿರುವ ಪ್ರದೇಶಗಳಿಗೆ ಬಸ್ ಸೇವೆಗಳನ್ನು ಪ್ರಾರಂಭಿಸುತ್ತದೆ.
ಅ. 6 ರಂದು ಬೆಳಿಗ್ಗೆ 10 ಕ್ಕೆ ಬಂಬ್ರಾಣದಲ್ಲಿ ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು ಗ್ರಾಮ ಬಂಡಿಗೆ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡುವರು ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. ಗ್ರಾ.ಪಂ.ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ಮಾತನಾಡಿ, ಜಿಲ್ಲೆಯಲ್ಲೇ ಹಳ್ಳಿಗಾಡಿನಲ್ಲಿ ಈ ಯೋಜನೆ ಜಾರಿಗೊಳಿಸುವಲ್ಲಿ ಕುಂಬಳೆ ಪಂಚಾಯತಿ ಮೊದಲ ಪ್ರಯೋಗ ನಡೆಸುತ್ತಿದೆ ಎಂದರು.
2023-2024ರ ವಾರ್ಷಿಕ ಯೋಜನೆಯಲ್ಲಿ 15 ಲಕ್ಷಗಳನ್ನು ನಿಗದಿಪಡಿಸಲಾಗಿದೆ. ಇದಕ್ಕೆ ಜಿಲ್ಲಾ ಯೋಜನಾ ಸಮಿತಿ ಅನುಮೋದನೆ ನೀಡಿದೆ. ಇಂಧನ ವೆಚ್ಚ, ಕೆ.ಎಸ್.ಆರ್.ಟಿ.ಸಿ. ಬಸ್ ಸಿಬ್ಬಂದಿಗಳ ವೇತನ ಮತ್ತು ಇತರ ದುರಸ್ಥಿ ಖರ್ಚುಗಳನ್ನು ಪಂಚಾಯತಿ ಭರಿಸಲಿದೆ. ಟಿಕೆಟ್ ಮೊತ್ತವನ್ನು ಸಂಪೂರ್ಣವಾಗಿ ಕೆ.ಎಸ್.ಆರ್.ಟಿ.ಸಿ. ಪಾವತಿಸುತ್ತದೆ. ಈ ಸೇವೆಯು ಪಿ.ಕೆ. ನಗರ, ಉಳುವಾರು, ಪಾಂಬಾಟ್ಟಿ, ಕುಂಬಳೆ ಸರ್ಕಾರಿ ಆಸ್ಪತ್ರೆ, ಐ.ಎಚ್.ಆರ್.ಡಿ.ಕಾಲೇಜು, ಪೇರಾಲು, ಮೊಗ್ರಾಲ್ ಶಾಲೆ ಮತ್ತು ಮುಳಿಯಡ್ಕ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಅಧ್ಯಕ್ಷೆ ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ತ್ರಿಸ್ತರ ಪಂಚಾಯತಿ ಮಟ್ಟದ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷದ ಪ್ರತಿನಿಧಿಗಳು ಭಾಗವಹಿಸುವರು.
ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್, ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಸಬೂರ, ಬಿ.ಎ.ರಹ್ಮಾನ್ ಆರಿಕ್ಕಾಡಿ, ನಸೀಮಾ ಖಾಲಿದ್, ಯೂಸುಫ್ ಉಳುವಾರು ಉಪಸ್ಥಿತರಿದ್ದರು.

.jpg)
