ತಿರುವನಂತಪುರ: ಸಹಕಾರಿ ಇಲಾಖೆಯ ಲೆಕ್ಕ ಪರಿಶೋಧನಾ ವರದಿ ಬಹಿರಂಗಪಡಿಸಿದ ವರದಿಯಲ್ಲಿ ಮಿಲ್ಮಾದಲ್ಲಿ ನಡೆದಿರುವ ಕೋಟಿಗಟ್ಟಲೆ ಅವ್ಯವಹಾರ ಬಯಲಾಗಿದೆ. ವರದಿ ಪ್ರಕಾರ, ಬೇರೆ ರಾಜ್ಯಗಳಿಂದ ರಾಜ್ಯಕ್ಕೆ ಹಾಲು ತರುವಲ್ಲಿ ಭಾರಿ ವಂಚನೆ ನಡೆಯುತ್ತಿದೆ. ಕಿಲೋಮೀಟರ್‍ಗಳನ್ನು ಹೆಚ್ಚಳಗೊಳಿಸಿ ಮತ್ತು ಟ್ಯಾಂಕರ್ ಬಾಡಿಗೆ ಏರಿಕೆಗೊಳಿಸಿ ವಂಚನೆ ನಡೆಸಲಾಗಿದೆ.
ಓಣಂ ಸಂದರ್ಭ ಹೆಚ್ಚುವರಿ ಹಾಲಿನ ಸರಬರಾಜು ಮರೆಯಲ್ಲಿ ಈ ವಂಚನೆ ನಡೆದಿದೆ. ಪ್ರತಿ ಲೀಟರ್ ಹಾಲಿಗೆ 9.29 ರೂ.ವೆಚ್ಚ ನೀಡಲಾಗಿದೆ. ತಿರುವನಂತಪುರಂ ಪ್ರದೇಶ ಒಕ್ಕೂಟದ ಲೆಕ್ಕ ಪರಿಶೋಧನಾ ವರದಿ ಹೇಳಿರುವಂತೆ ಮಹಾರಾಷ್ಟ್ರದಿಂದ ಪತ್ತನಂತಿಟ್ಟಕ್ಕೆ ಹಾಲನ್ನು ತಂದು ಉತ್ಪನ್ನಗಳಾಗಿ ಮಾರಾಟ ಮಾಡಿದಾಗ ಪ್ರತಿ ಲೀಟರ್ ಹಾಲಿಗೆ 3.69 ರೂಪಾಯಿ ನಷ್ಟವಾಗಿದೆ ಎಂದು ಹೇಳಲಾಗಿದೆ.
ಉತ್ಪಾದನಾ ವೆಚ್ಚ ಹೆಚ್ಚಿದೆ ಎಂಬ ಕಾರಣ ನೀಡಿ ಮಿಲ್ಮಾ ಹಾಲಿನ ದರ ಏರಿಕೆ ಮಾಡುವಂತೆ ಒತ್ತಡ ಹೇರಿತ್ತು. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ. ಕೋಟಿಗಟ್ಟಲೆ ‘ಖರ್ಚು’ ಮಾಡಿದ ಕಾರಣ ಹಾಲಿನ ದರ ಏರಿಕೆಯಿಂದ ಮಿಲ್ಮಾಗೆ ಲಾಭವಾಗಿಲ್ಲ ಎಂಬುದು ಲೆಕ್ಕ ಪರಿಶೋಧನೆಯಿಂದ ಗೊತ್ತಾಗಿದೆ.





