ಪೆರ್ಲ: ಬೇಂಗಪದವು ಶ್ರೀ ಗಿರಿಜಾಂಬಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ "ಕೆ-ಕಂಪೋಸ್ಟ್” ಎಂಬ ನೂತನ ಯೋಜನೆಗೆ ಚಾಲನೆ ನೀಡಲಾಯಿತು. ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಯೋಜನೆಯನ್ನು ಉದ್ಘಾಟಿಸಿ ಮಾತನಾಡಿ, ಶಾಲೆಗಳ ಅಡುಗೆ ಕೋಣೆ ತ್ಯಾಜ್ಯವನ್ನು ಯೋಗ್ಯ ರೀತಿಯಲ್ಲಿ ನಿರ್ವಹಣೆ ಮಾಡಬೇಕಾದ ಅಗತ್ಯವಿದೆ. ಶಾಲಾ ಪರಿಸರಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ತ್ಯಾಜ್ಯಗಳ ವಿಲೇವಾರಿ ಮಾಡಬೇಕಿದೆ. ಇಂತಹ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಪಂಚಾಯತಿ ಸದಾ ಬೆಂಬಲ ನೀಡುತ್ತದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ, ಪೆರ್ಲ ಕೃಷಿ ಭವನದ ಸಹಾಯಕ ಕೃಷಿ ಅಧಿಕಾರಿ ಜಯಶ್ರೀ ಅವರು, ನಮ್ಮ ಕೃಷಿ ಭವನದ ವ್ಯಾಪ್ತಿಯಲ್ಲಿ ಬರುವ ಶಾಲೆಯೊಂದು ಇಂತಹ ಉತ್ಪನ್ನವನ್ನು ತಯಾರಿಸುತ್ತಿರುವುದು ಶ್ಲಾಘನೀಯ. ಯೋಜನೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯೆ ಉಷಾ ಗಣೇಶ್ ಅಧ್ಯಕ್ಷತೆ ವಹಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಕೃಷ್ಣರಾಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಶಿವಕುಮಾರ್ ಸ್ವಾಗತಿಸಿ, ವಿದ್ಯಾರ್ಥಿನಿ ನಿಹಾರಿಕಾ ಪ್ರಾರ್ಥಿಸಿದರು. ಶಿಕ್ಷಕಿ ನಳಿನಿ ವಂದಿಸಿದರು. ಶಿಕ್ಷಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

.jpg)
