ಕಾಸರಗೋಡು: ಪೆರಿಯ ಆಲಂಗೋಡು ಗೋಕುಲಂ ಗೋಶಾಲೆಯಲ್ಲಿ 3ನೇ ವರ್ಷದ ದೀಪಾವಳಿ ಸಂಗೀತೋತ್ಸವ ನ. 10ರಿಂದ 19ರ ವರೆಗೆ ಜರುಗಲಿದ್ದು, ಹತ್ತು ದಇವಸಗಳ ಕಾಲಾವಧಿಯಲ್ಲಿ 350ಕ್ಕೂ ಹೆಚ್ಚು ಮಂದಿ ಕಲಾವಿದರು ತಮ್ಮ ಕಲಾಪ್ರತಿಭೆ ಪ್ರದಶಿಸಲಿದ್ದಾರೆ ಎಂಬುದಾಗಿ ವಿಷ್ಣು ಪ್ರಸಾದ್ ಹೆಬ್ಬಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
10ರಂದು ಬೆಳಗ್ಗೆ 9 ಗಂಟೆಗೆ ಏತನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಸಮಾರಂಭ ಉದ್ಘಾಟಿಸುವರು. ಉದುಮ ಶಾಸಕ ಸಿ ಎಚ್ ಕುಂಜಾಂಬು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮೊದಲ ದಿನ ನಡೆಯುವ ಸಂಗೀತ ಗೋಷ್ಠಿಯನ್ನು ಸಿಸ್ಟರ್ ಕಾಂಚನಾ ನಡೆಸಿಕೊಡಲಿದ್ದಾರೆ. ನವೆಂಬರ್ 10 ರಿಂದ 19 ರವರೆಗೆ ನಡೆಯುವ ಸಂಗೀತೋತ್ಸವವು ಬೆಳಿಗ್ಗೆ 9 ರಿಂದ ರಾತ್ರಿ 10 ರವರೆಗೆ ನಡೆಯಲಿದೆ.
ಖ್ಯಾತ ಪಿಟೀಲು ವಾದಕ ಪದ್ಮಭೂಷಣ ಎಲ್ ಸುಬ್ರಮಣ್ಯಂ, ಖ್ಯಾತ ಹಿನ್ನೆಲೆ ಗಾಯಕಿ ಕವಿತಾ ಕೃಷ್ಣಮೂರ್ತಿ, ಹಿನ್ನಲೆ ಗಾಯಕಿ ಅನೂಪ್ ಶಂಕರ್, ನೃತ್ಯಕಲಾವಿದೆ ಪದ್ಮಭೂಷಣ ಪದ್ಮಾಸುಬ್ರಮಣ್ಯಂ, ಕರ್ನಾಟಕ ಸಂಗೀತ ದಿಗ್ಗಜರಾದ ಪಟ್ಟಾಭಿರಾಮ ಪಂಡಿತ್, ಅಭಿಷೇಕ್ ರಘುರಾಮ್, ಕುನ್ನಕುಡಿ ಬಾಲಮುರಳಿ ಕೃಷ್ಣ, ಎನ್.ಜೆ.ನಂದಿನಿ, ಘಟಂ ಮಾಂತ್ರಿಕ ಸುರೇಶ್ ವೈದ್ಯನಾಥನ್, ಮೃದಂಗ ವಿದ್ವಾನ್ ಪತ್ರಿ ಸತೀಶ್ ಕುಮಾರ್ ಸೇರಿದಂತೆ 350ಕ್ಕೂ ಹೆಚ್ಚು ಮಂದಿ ಪ್ರತಿಭಾವಂತ ಕಲಾವಿದರು ಈ ಬಾರಿ ಗೋಶಾಲಾ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಗೀತೋತ್ಸವದಲ್ಲಿ ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಶ್ರೀಪಾದ್ ಯಶ್ಸೋ ನಾಯಕ್, ಶ್ರೀ ಸುಬ್ರಹ್ಮಣ್ಯ, ಉಡುಪಿ ಪುತ್ತಿಗೆ, ಶ್ರೀರಾಮಚಂದ್ರಾಪುರ ಮಠಾಧಿಪತಿಪತಿಗಳು, ಕರ್ನಾಟಕ ಸಚಿವ ಮಾಂಕಾಳ ವೈದ್ಯ, ಸಂಸದ ತೇಜಸ್ವಿ ಸೂರ್ಯ, ಕೇರಳದ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಸೇರಿದಂತೆ ಹಲವು ಮಂದಿ ಗಣ್ಯರು ಗೋಶಾಲೆಗೆ ಆಗಮಿಸಲಿದ್ದಾರೆ.ಸಂಗೀತೋತ್ಸವದ ದಿನಗಳಲ್ಲಿ ರಾತ್ರಿ 8 ಮತ್ತು 10 ಗಂಟೆಗೆ ಗೋಶಾಲೆಯಿಂದ ಕಾಂಜಂಗಾಡು ಭಾಗಕ್ಕೆ ಬಸ್ ಸೇವೆ ಇರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿನೋದ್ ಕೃಷ್ಣನ್ ಕೆ.ಪಿ, ವೆಳ್ಳಿಕೋತ್ ವಿಷ್ಣುಭಟ್, ಮಯ್ಯಿಲ್ ದಿಲೀಪನ ವಾಳುನ್ನವರ್, ಪ್ರಮೋದ್ ಪೆರಿಯ, ಮನೋಜ್ ಪೂಚಕಾಡ್ ಉಪಸ್ಥಿತರಿದ್ದರು.





