ಕಾಸರಗೋಡು: ಕೇರಳ ರಾಜ್ಯ 62ನೇ ಶಾಲಾ ಕಲಾತ್ಸವದ ಪೂರ್ವಭಾವಿಯಾಗಿ ಕಾಸರಗೋಡು ಶೈಕ್ಷಣಿಕ ಉಪಜಿಲ್ಲಾ ಕಲಾತ್ಸವ ನವೆಂಬರ್ 9, 10 ಹಾಗೂ ನ.13, 14 ಮತ್ತು 15 ರಂದು ಇರಿಯಣ್ಣಿ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಲಿದೆ. 120 ಶಾಲೆಗಳಿಂದ ಆಯ್ಕೆಯಾದ 5800 ಪ್ರತಿಭೆಗಳು 284 ಸ್ಪರ್ಧೆಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ವಿ. ಮಿನಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ನ. 9ಮತ್ತು 10ರಂದು ವೆದಿಕೇತರ ಸ್ಪರ್ಧೆಗಳು ನಡೆಯುವುದು. 13ರಂದು ಸಂಜೆ 4ಕ್ಕೆ ಉದುಮ ಶಾಸಕ ಸಿ.ಎಚ್.ಕುಂಜಾಂಬು ಉದ್ಘಾಟಿಸುವರು. ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಸಿಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸುವರು. ಶಾಸಕ ಎನ್. ಎ ನೆಲ್ಲಿಕುನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳುವರು. ನ.15ರಂದು ನಡೆಯುವ ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು.
ಕಲೋತ್ಸವದ ಯಶಸ್ವಿಗಾಗಿ 13 ಉಪಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಹಸಿರು ಶಿಷ್ಟಾಚಾರ ಪಾಲನೆಯೊಂದಿಗೆ ಕಲೋತ್ಸವ ನಡೆಯಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠೀಯಲ್ಲಿ ಉಪಜಿಲ್ಲಾ ಶಿಕ್ಷಣಾಧಿಕಾರಿ ಅಗಸ್ಟಿನ್ ಬರ್ನಾಡ್ ಮೊಂತೆರೋ, ಬಿ.ಕೆ.ನಾರಾಯಣನ್ ಬಿ.ಎಂ.ಪ್ರದೀಪ್, ಅಬ್ದುಲ್ ಸಲಾಂ ಎ.ಎಂ, ಸುಚೀಂದ್ರನಾಥ್ ಮತ್ತು ಪಿ.ಆರ್.ವೀಂದ್ರನ್ ಉಪಸ್ಥಿತರಿದ್ದರು.




