ಕುಂಬಳೆ: ಮಂಜೇಶ್ವರ ಉಪಜಿಲ್ಲಾ ಮಟ್ಟದ 62ನೇ ಶಾಲಾ ಕಲೋತ್ಸವವು ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನವಂಬರ್ 7 ರಿಂದ ಆರಂಭಗೊಂಡು ನಿನ್ನೆ ಸಂಜೆ ಸಮಾಪ್ತಿಯಾಯಿತು.4 ದಿನಗಳಲ್ಲಾಗಿ 120 ಶಾಲೆಗಳಿಂದ ಸುಮಾರು 4000 ಕ್ಕೂ ಅಧಿಕ ಮಂದಿ ತಮ್ಮ ಪ್ರತಿಭಾ ಪ್ರದರ್ಶನವನ್ನುಗೈದರು. ಈ ಸಂದರ್ಭ ವಿವಿಧ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದ ಶಾಲೆಗಳಿಗೆ ಪ್ರಶಸ್ತಿ ಫಲಕವನ್ನಿತ್ತು ಅಭಿನಂದಿಸಲಾಯಿತು.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿ, ಮಂಜೇಶ್ವರದ ಆಂತರಿಕ ಭಾಗದಲ್ಲಿರುವ ಧರ್ಮತ್ತಡ್ಕ ಪ್ರದೇಶದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲು ಕಾರಣವಾದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಹಲವು ಭಾಷೆಗಳ , ಹಲವು ಸಂಸ್ಕೃತಿಗಳ ಸಾಂಸ್ಕೃತಿಕ ವಿನಿಮಯವು ರಾಷ್ಟ್ರಕವಿ ಗೋವಿಂದ ಪೈಗಳು ಜನಿಸಿದ ಮಂಜೇಶ್ವರದ ನಾಡಿನಲ್ಲಿ ಕಲೋತ್ಸವದ ವೇದಿಕೆಯ ಮೂಲಕ ಬಹಳ ಪರಿಣಾಮಕಾರಿಯಾಗಿ ಮೂಡಿಬರಲು ಸಾಧ್ಯವಾಗಿದೆ ಎಂದರು. ಶಿಸ್ತುಬದ್ಧವಾಗಿ ಸಂಘಟಿಸಿದ ಧರ್ಮತ್ತಡ್ಕ ವಿದ್ಯಾಸಂಸ್ಥೆಗೆ ಹಾಗೂ ವಿದ್ಯಾಭಿಮಾನಿ ಜನತೆಗೆ ಅಭಿನಂದನೆಯನ್ನು ಸಲ್ಲಿಸಿದರು.
ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ ಕೆ , ಪುತ್ತಿಗೆ ಪಂಚಾಯತ್ ಅಧ್ಯಕ್ಷ ಸುಬ್ಬಣ್ಣ ಆಳ್ವ, ಉಪಾಧ್ಯಕ್ಷೆ ಜಯಂತಿ, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಪಾಲಾಕ್ಷ ರೈ, ಕಾಸರಗೋಡು ಎಸ್.ಎಸ್.ಕೆ ಜಿಲ್ಲಾ ಪ್ರೋಗ್ರಾಂ ಆಫೀಸರ್ ನಾರಾಯಣ ದೇಲಂಪಾಡಿ, ಮಂಗಳೂರು ಕಾಂಪ್ಕೋ ಲಿಮಿಟೆಡ್ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ಟಿ, ಎಚ್. ಎಂ ಫೋರಂ ಸಂಚಾಲಕ ಶಾಮ ಭಟ್ ಚೇವಾರ್ ಶುಭಾಶಯಗಳನ್ನು ತಿಳಿಸಿದರು. ಪುತ್ತಿಗೆ ಪಂಚಾಯತ್ ವೆಲ್ಫೇರ್ ಸ್ಟಾಂಡಿಂಗ್ ಸಮಿತಿ ಅಧ್ಯಕ್ಷೆ ಅನಿತಾ ಎಂ,ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಮಜೀದ್ , ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಿತೇಂದ್ರ ಎಸ್.ಎಚ್, ವಾರ್ಡ್ ಸದಸ್ಯರುಗಳಾದ ಕೇಶವ ಎಸ್ ಆರ್, ಜನಾರ್ಧನ ಪೂಜಾರಿ ಕೆ, ಅಶೋಕ ಭಂಡಾರಿ, ಗೀತಾ ಎಂ, ಪ್ರೇಮ ಎಸ್ ರೈ, ಸುನಿತಾ ವಾಲ್ಟಿ ಡಿಸೋಜ, ಜೆಡ್ ಎ ಕಯ್ಯಾರ್, ಆಸಿಪ್ ಅಲಿ, ರಹಮತ್ ರಹಮಾನ್ , ಶಾಂತಿ ವೈ, ಮಂಜೇಶ್ವರ ಬಿ.ಪಿ.ಸಿ ವಿಜಯಕುಮಾರ್ ಪಿ, ಸಾಮಾಜಿಕ ಕಾರ್ಯಕರ್ತ ಶಂಕರ ರಾವ್.ಕೆ, ಪಿ.ಟಿ.ಎ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಹಾಗೂ ಅಶೋಕ ಎನ್, ಎಂ.ಪಿ.ಟಿ.ಎ ಅಧ್ಯಕ್ಷೆ ಜಯಲಕ್ಷ್ಮಿ, ವಿದ್ಯಾಸಂಸ್ಥೆಗಳ ಕರೆಸ್ಪಾಂಡಂಟ್ ಶಾರದಾ ಅಮ್ಮ, ಹೈಯರ್ ಸೆಕೆಂಡರಿ ಶಾಲಾ ವ್ಯವಸ್ಥಾಪಕ ಶಂಕರ ನಾರಾಯಣ ಭಟ್, ಎ.ಯು.ಪಿ ಶಾಲೆ ವ್ಯವಸ್ಥಾಪಕಿ ವಿಜಯಶ್ರೀ , ಮಾಜಿ ವಾರ್ಡ್ ಸದಸ್ಯ ಅಮಿರ್ ಅಲಿ, ಎಸ್.ಎಂ.ಸಿ ಅಧ್ಯಕ್ಷ ಅಜೀಜ್ ಕಳಾಯಿ , ಪ್ರಾಂಶುಪಾಲ ರಾಮಚಂದ್ರ ಭಟ್, ಮುಖ್ಯೋಪಾಧ್ಯಾಯ ಗೋವಿಂದ ಭಟ್, ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ಉಪಸ್ಥಿತರಿದ್ದರು.

