ತಿರುವನಂತಪುರಂ: ಕೇರಳ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ನೇತೃತ್ವದಲ್ಲಿ ಆಯೋಜಿಸಲಾದ ವಿಜಿಲೆನ್ಸ್ ಜಾಗೃತಿ ಸಪ್ತಾಹದ ಸಮಾರೋಪ ಸಮಾರಂಭವನ್ನು ಶನಿವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು.
ಆನ್‍ಲೈನ್ ಬಳಕೆಯ ಇಂದಿನ ಕಾಲಘಟ್ಟದಲ್ಲಿ ತಪ್ಪು ವಿಧಾನಗಳನ್ನು ಅಳವಡಿಸಿಕೊಂಡು, ಭ್ರಷ್ಟಾಚಾರ ಮಾಡುವವರನ್ನು ಅದೇ ತಂತ್ರಜ್ಞಾನದ ಬೇರೊಂದು ವಿಧಾನದಿಂದ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕಟ್ಟುನಿಟ್ಟಿನ ಕ್ರಮವನ್ನೂ ಕೈಗೊಳ್ಳಬೇಕು. ಈ ವರ್ಷ 50 ಘಟನೆಗಳಲ್ಲಿ ಲಂಚ ಸ್ವೀಕರಿಸಿದ 58 ಅಧಿಕಾರಿಗಳನ್ನು ಬಂಧಿಸಲಾಗಿದೆ. ವಿಜಿಲೆನ್ಸ್ ವ್ಯವಸ್ಥೆ ಬಲಗೊಂಡರೂ ಕೆಲವರು ಭ್ರಷ್ಟಾಚಾರದಿಂದ ಹಿಂದೆ ಸರಿದಿಲ್ಲ ಎಂಬುದನ್ನು ಇಂತಹ ಘಟನೆಗಳು ತೋರಿಸುತ್ತಿವೆ ಎಂದು ಮುಖ್ಯಮಂತ್ರಿ ಹೇಳಿದರು.
ತಿರುವನಂತಪುರಂನ ಮ್ಯಾಸ್ಕಾಟ್ ಹೋಟೆಲ್‍ನ ಸಿಂಪನಿ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ವಿಜಿಲೆನ್ಸ್‍ನಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ ಅಧಿಕಾರಿಗಳಿಗೆ 2022 ರ ಗೌರವ ಬ್ಯಾಡ್ಜ್ ಅನ್ನು ಮುಖ್ಯಮಂತ್ರಿ ವಿತರಿಸಿದರು. ಮುಖ್ಯ ಕಾರ್ಯದರ್ಶಿ ವಿ. ವೇಣು ಅಧ್ಯಕ್ಷತೆ ವಹಿಸಿದ್ದರು. ವಿಜಿಲೆನ್ಸ್ ನಿರ್ದೇಶಕ ಟಿ.ಕೆ. ವಿನೋದ್ ಕುಮಾರ್, ವಿಜಿಲೆನ್ಸ್ ಐಜಿ ಹರ್ಷಿತಾ ಅತ್ತಲೂರಿ ಉಪಸ್ಥಿತರಿದ್ದರು.





