ಬೆಂಗಳೂರು: ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದ ಅಂಗವಾಗಿ ಶುಕ್ರವಾರ ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
ರಾಷ್ಟ್ರೋತ್ಥಾನ ಸಂಗೀತ, ನೃತ್ಯ ಕಲಾ ಕೇಂದ್ರದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಲಾ ಪ್ರದರ್ಶನ ನೀಡಿದರು. ಮೊದಲ ಭಾಗದಲ್ಲಿ ಹಿರಿಯ ತಬಲಾ ಶಿಕ್ಷಕರಾದ ಶ್ರೀಮಂತ್ ನೀಲೂ ಶಿಷ್ಯವೃಂದದವರಿಂದ ತಬಲಾ ವಾದನ ಪ್ರದರ್ಶನ ನಡೆಯಿತು. ಸುಜಿತ್, ಸನ್ನಿಧಿ, ಸುಮುಖ್, ದಾಕ್ಷಾಯಿಣಿ ತಬಲಾ ಪ್ರದರ್ಶನ ನೀಡಿ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದರು
ಬಳಿಕ ವಿದುಷಿಃ ಇಂದು ನಾಡಿಗ್ ಅವರ ಶಿಷ್ಯಂದಿರಾದ ಗೌರಿ ನಾಯಕ್, ಕೃತಿ ಶರ್ಮಾ, ಸೃಷ್ಟಿ ವಿಜಯ್, ಪ್ರೇರಣಾ ಶ್ರೀರಾಮ್, ಹರ್ಷಿಣಿ ಹಾಗೂ ಪ್ರಸೀತ ಅವರಿಂದ ಮನಮೋಹಕ ಭರತನಾಟ್ಯ ಪ್ರದರ್ಶನ ನಡೆಯಿತು. ರಾಷ್ಟ್ರೋತ್ಥಾನ ಯೋಗ ಕೇಂದ್ರದ ಸಂಯೋಜಕ ನಾಗೇಂದ್ರ ಕಾಮತ್ ಕಲಾವಿದರನ್ನು ಅಭಿನಂದಿಸಿದರು. ಸಾಹಿತ್ಯ ವಿಭಾಗದ ಸಂಚಾಲಕ ವಿಘ್ನೇಶ್ವರ ಭಟ್ ನೇತೃತ್ವ ವಹಿಸಿದ್ದರು.
ಇಂದು(ಶನಿವಾರ) ಬೆಳಿಗ್ಗೆ 11 ರಿಂದ ಹಿರಿಯ ರಂಗಭೂಮಿ ಕಲಾವಿದ, ನಿರ್ದೇಶಕ ಅದ್ದಂಡ ಕಾರ್ಯಪ್ಪ ಅವರಿಂದ ‘ ಕನ್ನಡ ರಂಗಭೂಮಿ ಮತ್ತು ರಾಷ್ಟ್ರೀಯತೆ’ ಹಾಗೂ ಸಂಜೆ 5 ರಿಂದ ಲೇಖಕ, ಉಪನ್ಯಾಸಕ ಡಾ.ಅಜಕ್ಕಳ ಗಿರೀಶ ಭಟ್ ಅವರಿಂದ ‘ಭಾರತೀಯತೆಯ ಸತ್ತ್ವ’ ವಿಷಯದಲ್ಲಿ ವಿಶೇಷ ಉಪನ್ಯಾಸ ನಡೆಯಲಿದೆ. ಭಾನುವಾರ ಬೆಳಿಗ್ಗೆ 11 ರಿಂದ ಭೂ ವಿಜ್ಞಾನಿ, ವಿಜ್ಞಾನ ಲೇಖಕ ಡಾ.ಟಿ.ಆರ್.ಅನಂತರಾಮು ಅವರೊಂದಿಗೆ ಲೇಖಕ ಕಲ್ಗುಂಡಿ ನವೀನ್ ಹಾಗೂ ಸಂಜೆ 5 ರಿಂದ ಲೇಖಕಿ, ಸಂಘಟಕಿ ಡಾ.ವಿ.ಬಿ.ಆರತಿ ಅವರೊಂದಿಗೆ ವೈದ್ಯೆ, ಲೇಖಕಿ ಡಾ.ಸುವರ್ಣಿನಿ ಕೊಣಲೆ ಸನಾತನ ಭಾರತ ವಿಷಯದಲ್ಲಿ ಸಂವಾದ ನಡೆಸುವರು.


