ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ನವೀಕರಣ ಜೀರ್ಣೋದ್ಧಾರ ಕಾರ್ಯಗಳ ಹಿನ್ನೆಲೆಯಲ್ಲಿ ಒಂದು ಕೋಟಿ ರೂ.ವೆಚ್ಚದಲ್ಲಿ ಸುಂದರ ಹಾಗೂ ಅತ್ಯಾಕರ್ಷಕ ಶೈಲಿಯ ರಾಜಗೋಪುರ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.
ಶ್ರೀಕ್ಷೆತ್ರ ನವೀಕರಣ ಸಮಿತಿ ಈ ಬಗ್ಗೆ ಸಮಾಲೋಚನೆ ನಡೆಸಿದ್ದು, ನ. 25ರಂದು ಕೇಂದ್ರ ಸಚಿವರೊಬ್ಬರ ಮೂಲಕ ಈ ಬೃಹತ್ ಯೋಜನೆಯ ಶಿಲಾನ್ಯಾಸ ನಡೆಸಲೂ ಚಿಂತನೆ ನಡೆಸಲಾಗಿದೆ. 30.6ಅಡಿ ಉದ್ದ, 17.3ಅಡಿ ವಿಸ್ತೀರ್ಣ, 41ಅಡಿ ಎತ್ತರದಲ್ಲಿ ರಾಜಗೋಪುರ ನಿರ್ಮಾಣಗೊಳ್ಳಲಿದೆ. ಶ್ರೀಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಖ್ಯಾತ ಉದ್ಯಮಿ, ಧಾರ್ಮಿಕ ಮುಖಂಡ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ರಾಜಗೋಪುರ ನಿರ್ಮಾಣವೆಚ್ಚ ಭರಿಸಲಿದ್ದಾರೆ. ಮಧೂರು ಶ್ರೀಮದನಂತೇಶ್ವರ ದೇವಾಲಯದಲ್ಲಿ ಸುಮಾರು 20ಕೋಟಿ ರೂ, ವಚ್ಚದ ಕಾಮಗಾರಿ ಈಗಾಗಲೇ ನಡೆದಿದ್ದು, ಅತಿಥಿಗೃಹ, ಭೋಜನಶಾಲೆ, ರಾಜಗೋಪುರ ಕಾಮಗಾರಿ ಇನ್ನಷ್ಟೆ ನಡೆಯಬೇಕಾಗಿದೆ. ದೇವಾಲಯದಲ್ಲಿ ನವೀಕರಣ ಕಾಮಗಾರಿ ಪೂರ್ತಿಗೊಳಿಸಿ, 2025ರ ವೇಳೆಗೆ ಬ್ರಹ್ಮಕಲಶೋತ್ಸವ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ.




