ಕಾಸರಗೋಡು: ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಮತ್ತು ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ಮಹಿಳಾ ಸಂಘ ವೇದಿಕೆಯು ದೇಶದ 425 ಜಿಲ್ಲೆಗಳಲ್ಲಿ ಆಯೋಜಿಸುತ್ತಿರುವ ಮಹಿಳಾ ಸಮಾವೇಶದ ಅಂಗವಾಗಿ ಕಾಸರಗೋಡು ಜಿಲ್ಲಾ ಸ್ತ್ರೀಶಕ್ತಿ ಸಂಗಮ ಡಿ. 10ರಂದು ಬೆಳಗ್ಗೆ 9.30ಕ್ಕೆ ವಿದ್ಯಾನಗರ ಚಿನ್ಮಯ ತೇಜಸ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಮಹಿಳಾ ಸಮನ್ವಯ ವೇದಿಕೆ ಜಿಲ್ಲಾ ಸಂಯೋಜಕಿ ಸರಿತಾ ದಿನೇಶ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಮಾರಂಭ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಜಿಲ್ಲೆಯ ಪ್ರಮುಖ ಮಹಿಳೆಯರನ್ನು ಸನ್ಮಾನಿಸಲಾಗುವುದು. ನಂತರ ಭಾರತೀಯ ಸ್ತ್ರೀ ಸಂಕಲ್ಪಂ ವಿಷಯದ ಕುರಿತು ಶ್ರೀ ಚೇತನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕೊಲ್ಲಂನ ಶ್ರೀ ನಾರಾಯಣ ಕಾಲೇಜಿನ ಸಂಸ್ಕøತ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಜಯಶ್ರೀ, ಶ್ರೀಮತಿ ಜಯಲಕ್ಷ್ಮಿ ಕಾರಂತ್ ಮತ್ತು ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳು, ರಾಷ್ಟ್ರದ ಪ್ರಗತಿ ಕುರಿತು ಕೇರಳ ಎನ್‍ಜಿಒ ಸಂಘದ ರಾಜ್ಯ ಕಾರ್ಯದರ್ಶಿ ಆರ್ಯ ಪಿ, ಮಹಿಳಾ ಪಾತ್ರ ವಿಷಯ ಕುರಿತು ಮಹಿಳಾ ಸಂಘವೇದಿಕೆ ರಾಜ್ಯ ಸಂಚಾಲಕ ವಕೀಲೆ ಜಿ. ಅಂಜನಾದೇವಿ ಉಪನ್ಯಾಸ ನೀಡಲಿದ್ದಾರೆ. ಈ ಸಂದರ್ಭ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು. ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆ ನಡೆಸುತ್ತಿರುವ 2ಸಾವಿರಕ್ಕೂ ಹೆಚ್ಚು ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಲಿರುವುದಾಗಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ , ಸ್ವಾಗತ ಸಂಘದ ಪ್ರಧಾನ ಸಂಚಾಲಕಿ ಗೀತಾ ಬಾಬುರಾಜ್, ಕಾಸರಗೋಡು ನಗರಸಭಾ ಸದಸ್ಯೆ ಸವಿತಾ ಟೀಚರ್ ಉಪಸ್ಥಿತರಿದ್ದರು.




