ಕಾಸರಗೋಡು: ನವಕೇರಳ ಯಾತ್ರೆ ವೇಳೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಡಿರುವ ಆರೋಪಗಳನ್ನು ಬೆಂಬಲಿಸಿ, ಲೋಕಸಭೆಯಲ್ಲಿ ತುರ್ತು ನಿರ್ಣಯ ಮಂಡಿಸುವ ಮೂಲಕ ಸಿಪಿಎಂನ ದುರಾಡಳಿತವನ್ನು ಪೋಷಿಸುವ ಕೆಲಸವನ್ನು ಕಾಂಗ್ರೆಸ್ ನಡೆಸುತ್ತಿರುವುದಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್ ಟೀಕಿಸಿದ್ದಾರೆ.
ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು.
ಕೇರಳ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಕಾರಣವೆಂದು ನವಕೇರಳ ಯಾತ್ರೆಯಾದ್ಯಂತ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಚಾರ ನಡೆಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಸಂಸದ ಟಿ.ಎನ್.ಪ್ರತಾಪನ್ ಅವರು ಲೋಕಸಭೆಯಲ್ಲಿ ತುರ್ತು ನಿರ್ಣಯದ ಮೂಲಕ ಇದೇ ವಿಷಯವನ್ನು ಪ್ರಸ್ತಾಪಿಸುತ್ತಿದ್ದಾರೆ.
ಕೇರಳದಲ್ಲಿ ಪರಸ್ಪರ ಕಚ್ಚಾಡುತ್ತಿರುವ ಸಿಪಿಎಂ ಮತ್ತು ಕಾಂಗ್ರೆಸ್, ದೆಹಲಿಯಲ್ಲಿ ಜತೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪಿಣರಾಯಿ ವಿಜಯನ್ ಮತ್ತು ಸಿಪಿಎಂ ಪರವಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಧ್ವನಿಯೆತ್ತುತ್ತಿದ್ದರೆ, ಕೇರಳದ ಕೆಪಿಸಿಸಿ ಅಧ್ಯಕ್ಷರಾಗಲಿ ಅಥವಾ ವಿರೋಧ ಪಕ್ಷದ ನಾಯಕರಾಗಲಿ ಚಕಾರವೆತ್ತುತ್ತಿಲ್ಲ. ಒಂದೆಡೆ ನವಕೇರಳ ಸಮಾವೇಶ ಬಹಿಷ್ಕರಿಸುತ್ತಿರುವ ಕಾಂಗ್ರೆಸ್, ಇನೊಂದೆಡೆ ಯಾತ್ರೆಯಾದ್ಯಂತ ಪಿಣರಾಯಿ ವಿಜಯನ್ ನಡೆಸುತ್ತಿರುವ ಆರೋಪಗಳನ್ನು ಲೋಕಸಭೆಯಲ್ಲಿ ಬೆಂಬಲಿಸಿ ಮಾತನಾಡುತ್ತಿರುವುದು ಕೇರಳದ ಜನತೆಗೆ ಎಸಗುವ ವಂಚನೆಯಾಗಿದೆ. ಕೇರಳದಲ್ಲಿ ಪರಸ್ಪರ ಹೋರಾಟ ನಡೆಸಿ ಹೊರಗೆ 'ಐಎನ್‍ಡಿಐಎ'ಲಾಂಛನದಡಿ ಒಟ್ಟಾಗುತ್ತಿರುವ ಸಿಪಿಎಂ ಮತ್ತು ಕಾಂಗ್ರೆಸ್ ಕೇರಳದ ಜನತೆಗೆ ಉತ್ತರ ನೀಡಬೇಕು ಎಂದು ತಿಳಿಸಿದರು.





