ಉಪ್ಪಳ: ಉಪ್ಪಳ ಕೈಕಂಬದಲ್ಲಿ ಪರೀಕ್ಷೆಗೆ ಹೆದರಿ ಇಬ್ಬರು ವಿದ್ಯಾರ್ಥಿಗಳು ತಮ್ಮ ಶಾಲಾಬ್ಯಾಗ್ ಉಪೇಕ್ಷಿಸಿ ಕುರುಚಲು ಪೊದೆಯೆಡೆ ಅವಿತು ಕುಳಿತಿದ್ದು, ವಾರಸುದಾರರಿಲ್ಲದ ಸ್ಥಿತಿಯಲ್ಲಿ ಕಂಡುಬಂದ ಬ್ಯಾಗುಗಳು ಪೊಲೀಸರನ್ನು ಹಾಗೂ ರ್ಸಾಜನಿಕರನ್ನು ಆತಂಕಕ್ಕೆ ತಳ್ಳಿದ ಘಟನೆ ನಡೆದಿದೆ.
ಬುಧವಾರ ಬೆಳಗ್ಗೆ ಉಪ್ಪಳ ಕೈಕಂಬ ಸನಿಹದ ಮಣ್ಣಿನ ದಿಡೆಡ ಬಳಿ ಎರಡು ಶಾಲಾ ಬ್ಯಾಗ್ ಕಂಡುಬಂದಿತ್ತು. ಆದರೆ, ವಿದ್ಯಾರ್ಥಿಗಳು ಯಾರೂ ಕಂಡುಬಾರದ ಹಿನ್ನೆಲೆಯಲ್ಲಿ ಸ್ಥಳೀಯರು ಮಂಜೇಶ್ವರ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಬ್ಯಾಗ್‍ನ ವಾರಸುದಾರರಿಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಬಹಳ ಹೊತ್ತಿನವರೆಗೂ ಮಕ್ಕಳು ಬಾರದಿದ್ದಾಗ ಆತಂಕ ಮತ್ತಷ್ಟು ಹೆಚ್ಚಲು ಕಾರಣವಾಯಿತು. ಬ್ಯಾಗ್ ಪತ್ತೆಯಾದ ಸ್ಥಳದಲ್ಲಿ ಹಾಗೂ ಆಸುಪಾಸು ವ್ಯಾಪಕ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಪೊಲೀಸರು ಹಾಗೂ ಸ್ಥಳೀಯರು ಬ್ಯಾಗ್ ಇರಿಸಿದ ಸ್ಥಳದಲ್ಲಿ ಕಾವಲು ಕುಳಿತಿದ್ದು, ಸಂಜೆಯಗುತ್ತಿದ್ದಂತೆ ಸಂಜೆ 4ರ ವೇಳೆಗೆ ಇಬ್ಬರು ವಿದ್ಯಾರ್ಥಿಗಳು ಬ್ಯಾಗ್ ತೆಗೆದುಕೊಳ್ಳಲು ಸ್ಥಳಕ್ಕಾಗಮಿಸಿದ್ದಾರೆ. ತಕ್ಷಣ ಇವರನ್ನು ಸೆರೆಹಿಡಿದು ವಿಚಾರಣೆಗೊಳಪಡಿಸಿದಾಗ ಪರೀಕ್ಷೆಗೆ ಹೆದರಿ, ಬ್ಯಾಗ್ ಇಲ್ಲೆ ಬಿಟ್ಟು, ಮಣ್ಣಂಗುಳಿ ಮೈದಾನ ಸನಿಹದ ಕುರುಚಲು ಕಾಡಿನಮಧ್ಯೆ ಅವಿತುಕುಳಿತಿದ್ದುದಾಗಿ ಮಾಹಿತಿ ನೀಡಿದ್ದರು. ನಂತರ ವಿದ್ಯಾರ್ಥಿಗಳ ಹೆತ್ತವರನ್ನು ಕರೆಸಿ, ಅವರ ವಶಕ್ಕೊಪ್ಪಿಸಿದ್ದಾರೆ.





