ಕಾಸರಗೋಡು: ರಾಜ್ಯ ಆಹಾರ ಆಯೋಗದ ಸದಸ್ಯೆ ಎಂ. ವಿಜಯಲಕ್ಷ್ಮಿ ನೇತೃತ್ವದ ತಂಡ ವೆಳ್ಳರಿಕುಂಡ್ ತಾಲೂಕಿನ ವಿವಿಧ ಬುಡಕಟ್ಟು ಜನಾಂಗದ ಗ್ರಾಮಗಳಿಗೆ ಹಾಗೂ ಶಾಲೆಗಳಿಗೆ ಭೇಟಿ ನೀಡಿತು.
ವೆಸ್ಟ್ ಎಳೇರಿ ಪಂಚಾಯತ್‍ನ ಅತಿರುಮಾವ್ ಕಾಲೋನಿ, ಬಳಾಲ್ ಪಂಚಾಯತ್‍ನ ವಲೈಲ್ ಕಾಲೋನಿ ಮತ್ತು ಮಾಲೋತ್‍ನ ಕಸಬಾ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಆಹಾರ-ನಾಗರಿಕ ಸರಬರಾಜು, ಗಿರಿಜನ ಇಲಾಖೆ, ಅರಣ್ಯ, ಐ.ಸಿ.ಡಿ. ಎಸ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜತೆಗಿದ್ದರು. ಕಾಲನಿಗಳ ಹದಿನೈದಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಪಡಿತರ ಅಂಗಡಿಗಳ ಮೂಲಕ ಅಂತ್ಯೋದಯ ಅನ್ನ ಯೋಜನೆಯಡಿ ಅಕ್ಕಿ ಲಭ್ಯತೆ ಮತ್ತು ಅಂಗನವಾಡಿಗಳ ಮೂಲಕ ಮಕ್ಕಳಿಗೆ ಮತ್ತು ತಾಯಂದಿರಿಗೆ ಉಚಿತ ಆಹಾರ ವಿತರಣೆ ಸಮರ್ಪಕವಾಗಿ ಲಭ್ಯವಾಗುತ್ತಿರುವ ಬಗ್ಗೆ ಮನೆಯವರಿಂದ ಮಾಹಿತಿ ಪಡೆದುಕೊಳ್ಳಲಾಯಿತು.
ಕಾಲನಿಯ ಉಪ ಕುಟುಂಬಗಳಿಗೆ ಪಡಿತರ ಚೀಟಿ ಪಡೆಯಲಿರುವ ತೊಡಕು, ಆಧಾರ್ ಕಾರ್ಡ್ ಇಲ್ಲದ ಕಾರಣ ಪಡಿತರ ಚೀಟಿ ಪಡೆಯಲು ಸಾಧ್ಯವಾಗದಿರುವುದು, ಸಕ್ಕರೆ ಸಿಗದೆ ಪರದಾಡುತ್ತಿರುವ ಬಗ್ಗೆ ಮನೆಯವರು ತಂಡದೊಂದಿಗೆ ಮಾಹಿತಿ ಹಂಚಿಕೊಂಡರು. ಪಡಿತರ ಚೀಟಿ ಇಲ್ಲದ ಉಪಕುಟುಂಬಗಳಿಗೆ ನೀಡಲು ಕ್ರಮಕೈಗೊಳ್ಳಲಾಗುವುದು. ನಾನಾ ಕಾರಣಗಳಿಂದ ಆಧಾರ್ ನೀಡದೇ ಇರುವವರಿಗೆ ವಿಶೇಷ ಅನುಮತಿ ಪಡೆದು ಹೊಸ ಪಡಿತರ ಚೀಟಿ ನೀಡಲಾಗುವುದು ಎಂಬುದಾಗಿ ಅದಿಕಾರಿಗಳು ಲಿಖಿತ ಭರವಸೆ ನೀಡಿದರು.
ಇದಕ್ಕಾಗಿ ದಾಖಲೆಗಳೊಂದಿಗೆ ಮುಂದಿನ ಬುಧವಾರ ಪೂರೈಕೆ ಕಚೇರಿಗೆ ಹಾಜರಾಗುವಂತೆ ತಿಳಿಸಲಾಯಿತು.
ಆಹಾರ ಆಯೋಗ ಕಚೇರಿಯ ಪಡಿತರ ನಿರೀಕ್ಷಕ ವಿ. ರಂಜಿತ್, ವೆಳ್ಳರಿಕುಂದ ತಾಲೂಕು ಸರಬರಾಜು ಅಧಿಕಾರಿ ಟಿ.ಸಿ.ಸಜೀವನ್, ಸಹಾಯಕ ತಾಲೂಕು ಸರಬರಾಜು ಅಧಿಕಾರಿ ಎ.ಕೆ. ಪ.ಚಂದ್ರಶೇಖರನ್, ಪಡಿತರ ನಿರೀಕ್ಷಕರಾದ ಕೆ. ಕೆ ರಾಜೀವನ್, ಜಾಸ್ಮಿನ್ ಕೆ. ಆಂಟನಿ, ಕಾಞಂಗಾಡು ವಲಯ ಅರಣ್ಯಾಧಿಕಾರಿ ಎ. ಪಿ ಶ್ರೀಜಿತ್, ಚಿತ್ತಾರಿಕಲ್ ಎಇಒ ಉಷಾಕುಮಾರಿ, ಮಧ್ಯಾಹ್ನದ ಊಟದ ಅಧಿಕಾರಿಗಳಾದ ಇ.ಪಿ.ಉಷಾ, ಸುನೀಲಕುಮಾರ್, ಗಿರಿಜನ ವಿಸ್ತರಣಾಧಿಕಾರಿ ಟಿ. ಬಾಬು, ಪ್ರವರ್ತಕರಾದ ಸಿ.ಪಿ.ರತೀಶ್, ಪಿ.ಮನೋಜ್, ಬಳಾಲ್ ಪಂಚಾಯಿತಿ ಆರ್ಕಿಟೆಕ್ಟ್ ಎಂಜಿನಿಯರ್ ಕೆ.ಎಸ್.ರಜನಿ, ಐಸಿಡಿಎಸ್ ಮೇಲ್ವಿಚಾರಕರಾದ ಶರಣ್ಯ ವೇಣು, ಪಿ. ಸಿ ಸುಮಾ, ಸಿಡಿಪಿಒ ಪಿಕೆ ಜಯಶ್ರೀ, ವಿ ಪ್ರಕಾಶನ್ ಹಾಗೂ ಊರಿನ ಹಿರಿಯರಾದ ಲಕ್ಷ್ಮಿ, ಕುಞÂರಾಮನ್ ಮತ್ತು ಎಂ.ಮಧು ಉಪಸ್ಥಿತರಿದ್ದರು.


