ಕಾಸರಗೋಡು: ನಗರಸಭಾ ಜನಪರ ಯೋಜನಾ 2024-25ನೇ ಸಾಲಿನ ಅಭಿವೃದ್ಧಿ ವಿಚಾರಸಂಕಿರಣ ಮಂಗಳವಾರ ನಗರಸಭಾಂಗಣದಲ್ಲಿ ಜರುಗಿತು. ಸ್ಥಳೀಯಾಡಳಿತ ಖಾತೆ ಮಾಜಿ ಸಚಿವ ಸಿ.ಟಿ ಅಹಮ್ಮದಾಲಿ ವಿಚಾರಸಂಕಿರಣ ಉದ್ಘಾಟಿಸಿ, ಯೋಜನೆ ಕರಡು ಪುಸ್ತಕ ಬಿಡುಗಡೆಗೊಳಿಸಿದರು.
ನಗರಸಭಾ ಉಪಾಧ್ಯಕ್ಷೆ ಶಂಸಿದಾ ಫಿರೋಸ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಕಾರ್ಯದರ್ಶಿ ಪಿ.ಎ ಜಸ್ಟಿನ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸ್ತಾಯೀ ಸಮಿತಿ ಅಧ್ಯಕ್ಷರಾದ ಎ. ಅಬ್ದುಲ್ ರಹಮಾನ್, ಖಾಲಿದ್ ಪಚ್ಚಕ್ಕಾಡ್, ಸ್ರೀಮತಿ ರಿತಾ ಆರ್, ಸಿಯಾನಾ ಹನೀಫ್, ನಗರಸಭಾ ಸದಸ್ಯರಾದ ಬೀಫಾತಿಮಾ ಇಬ್ರಾಹಿಂ, ರಂಜಿತಾ, ರಮೇಶ್ ಪಿ, ಲಲಿತಾ, ಸದಸ್ಯ ಕಾರ್ಯದರ್ಶಿ ಜಯಚಂದ್ರನ್ ಪಿ.ವಿ ಉಪಸ್ಥಿತರಿದ್ದರು.
ಬಿಜೆಪಿ ಸದಸ್ಯರ ವಿರೋಧ:
ಯೋಜನಾ ಕರಡು ಪುಸ್ತಿಕೆ ಕನ್ನಡದಲ್ಲಿ ಪ್ರಕಟಿಸದೆ, ಮಲಯಾಳದಲ್ಲಿ ಮಾತ್ರ ಪ್ರಕಟಿಸಿರುವುದನ್ನು ಬಿಜೆಪಿಯ ಹಿರಿಯ ಸದಸ್ಯೆ ಸವಿತಾ ಟೀಚರ್ ಸಭೆಯಲ್ಲಿ ಖಂಡಿಸಿದರು. ನಗರಸಭಾ ವ್ಯಾಪ್ತಿಯಲ್ಲಿ ಬಹುತೇಕ ಮಂದಿ ಕನ್ನಡಿಗರಿದ್ದರೂ, ಯೋಜನೆ ಕರಡುಪುಸ್ತಕ ಕನ್ನಡ ಭಾಷೆಯಲ್ಲಿ ತಯಾರಿಸದೆ ಕನ್ನಡಿಗರಿಗೆ ವಂಚನೆಯೆಸಗಲಾಗಿದೆ. ನಗರಸಭೆಯ ಕನ್ನಡ ವಿರೋಧಿ ಧೋರಣೆ ಖಂಡನೀಯ ಎಂದು ತಿಳಿಸಿದರು. ಇದಕ್ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರತಿಪಕ್ಷ ಮುಖಂಡ ಪಿ.ರಮೇಶ್ ಅವರೂ ಧ್ವನಿಗೂಡಿಸಿ, ಯೋಜನೆ ಕರಡು ಪುಸ್ತಕ, ಬಜೆಟ್ ಪುಸ್ತಕ ಮಲಯಾಳದ ಜತೆ ಕನ್ನಡದಲ್ಲೂ ನೀಡಲು ನಗರಸಭೆ ಮುಮದಾಗಬೇಕು ಎಂದು ತಿಳಿಸಿದರು. ನಗರಸಭಾ ಉಪಾಧ್ಯಕ್ಷೆ ಶಂಸಿದಾ ಫಿರೋಸ್ ಉತ್ತರಿಸಿ, ಪುಸ್ತಕದ ಬಗ್ಗೆ ಸಂಶಯಗಳಿದ್ದಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದಾಗ, ಮಲಯಾಳದ ಬರಹ ಅರ್ಥೈಸಿಕೊಳ್ಳಲಾಗದಿದ್ದಲ್ಲಿ ಇನ್ನು ಸಂಶಯ ಹೇಗೆ ಹುಟ್ಟಿಕೊಳ್ಳುತ್ತದೆ ಎಂಬುದಾಗಿ ಬಿಜೆಪಿ ಸದಸ್ಯರು ತಿರುಗೇಟು ನೀಡಿದರು.
ಚಿತ್ರ-1): ನಗರಸಭಾ ಅಭಿವೃದ್ಧಿ ವಿಚಾರ ಸಂಕಿರಣವನ್ನು ಮಾಜಿ ಸಚಿವ ಸಿ.ಟಿ ಅಹಮ್ಮದಾಲಿ ಉದ್ಘಾಟಿಸಿ ಮಾತನಾಡಿದರು.
ಚಿತ್ರ-2): ಅಭಿವೃದ್ಧಿ ಯೋಜನೆ ಕರಡು ಪುಸ್ತಕ ಕನ್ನಡದಲ್ಲಿ ಪ್ರಕಟಿಸದಿರುವ ಬಗ್ಗೆ ಬಿಜೆಪಿ ಹಿರಿಯ ಸದಸ್ಯೆ ಸವಿತಾ ಟೀಚರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.


