ಬದಿಯಡ್ಕ: ನಾರಂಪಾಡಿ ಸಮೀಪದ ಪುಳಿತ್ತಡಿಯ ನಾರಾಯಣೀಯಂ ಸಂಗೀತ ಶಾಲೆಯಲ್ಲಿ ವೀಣಾವಾದಿನಿ ಸಂಗೀತ ವೇದಿಕ್ ತಾಂತ್ರಿಕ ವಿದ್ಯಾಪೀಠದ 25ನೇ ವರ್ಷಾಚರಣೆಯ ಅಂಗವಾಗಿ ಫೆ.1ರಿಂದ ನಾಲ್ಕು ದಿನಗಳ ಕಾಲ 'ವೇದನಾದ ಯೋಗ ತರಂಗಿಣಿ ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ.
ಫೆ.1ರಂದು ಬೆಳಗ್ಗೆ 1 ಗಂಟೆಗೆ ಚಕ್ರಾಬ್ಜ ಪೂಜೆಯು ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದರಿ ಮತ್ತು ಬಾಲಕೃಷ್ಣ ಭಟ್ ನೇತೃತ್ವದಲ್ಲಿ ನಡೆಯಲಿದೆ. ಫೆ.2ರಂದು ಬೆಳಗ್ಗೆ 9.30ಕ್ಕೆ ಭದ್ರದೀಪಂ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹಾಗೂ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಮುಲ್ಲಪಳ್ಳಿ ಕೃಷ್ಣನ್ ನಂಬೂದಿರಿ, ಬಳ್ಳಪದವು ರಾಧಾಕೃಷ್ಣ ಭಟ್, ಯೋಗ ಶಿಕ್ಷಕ ಪ್ರವೀಣ್ ಕುಮಾರ್ ಭಾಗವಹಿಸುವರು. 6.30ರಿಂದ ಯೋಗೀಶ ಶರ್ಮ ಬಳ್ಳಪದವು ಅವರಿಂದ ನಾದಮಾಧುರಿ ನಡೆಯಲಿದೆ.
ಫೆ.3ರಂದು ಬೆಳಗ್ಗೆ 9ರಿಂದ ಹೊಸಹಳ್ಳಿಯ ಕೆ. ವೆಂಕಟ್ರಾಮ್, ಕೆ. ಸುಬ್ಬರಾವ್ ಹಾಗೂ ವಿ. ರಾಘವನ್ ಅವರಿಂದ ದ್ವಂದ್ವ ಪಿಟೀಲು ವಾದನ ನಡೆಯಲಿದೆ. ನಿಕ್ಷಿತ್ ಪುತ್ತೂರು ಮೃದಂಗ, ಮಾಂಜೂರು ಉಣ್ಣಿಕೃಷ್ಣನ್ ಘಟಂನಲ್ಲಿ ಸಹಕರಿಸುವರು. ನಂತರ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ 4ರಿಂದ ಗುರು ಪೂಜೆ, 5ರಿಂದ ಹರಿಪ್ರಸಾದ ಸುಬ್ರಹ್ಮಣ್ಯನ್ ಅವರಿಂದ ಕೊಳಲುವಾದನ ನಡೆಯಲಿದೆ. 7ರಿಂದ ವಿನಿತಾ ನೆಡುಂಗಡಿ ಅವರಿಂದ ಮೋಹಿನಿಯಾಟ್ಟಂ ಜರುಗಲಿದೆ.
ಫೆ.4ರಂದು ಬೆಳಗ್ಗೆ 6.15ಕ್ಕೆ ಯೋಗ ಶಿಕ್ಷಕ ಪ್ರವೀಣ್ ಕುಮಾರ ಅವರಿಂದ ಹಠ ಯೋಗ, 9ರಿಂದ ಪಂಚರತ್ನ ಕೃತಿಯ ಆಲಾಪನೆ ನಡೆಯಲಿದೆ. ಅಪರಾಹ್ನ 3ರಿಂದ ವಾಗ್ಗೇಯಕಾರ ಡಾ. ಎಂ ಬಾಲಮುರಳೀಕೃಷ್ಣ ಸಂಸ್ಮರಣೆ, ಸಂಜೆ 4ರಿಂದ ವೀಣಾವಾದಿನಿ ಪುರಸ್ಕಾರ ಪ್ರದಾನ ನಡೆಯಲಿದೆ. ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ಎನ್ ಎ ನೆಲ್ಲಿಕ್ಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬೆಂಗಳೂರಿನ ರೇವತಿ ಕಾಮತ್, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಎಣ್ಮಕಜೆ ಸುಧೀರ್ ಕುಮಾರ ಶೆಟ್ಟಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಮೃದಂಗ ವಿದ್ವಾನ್ ಚೇರ್ತಲ ಜಿ ಕೃಷ್ಣ ಕುಮಾರ ಅವರಿಗೆ 2024ರ ಸಾಲಿನ ವೀಣಾವಾದಿನಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಸಂಜೆ 5.30ರಿಂದ ಎಂ ಕೆ ಶಂಕರನ್ ನಂಬೂದಿರಿ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಲಿದೆ. ಹಿಮ್ಮೇಳದಲ್ಲಿ ಮಂಜೂರು ರಂಜಿತ್(ಪಿಟೀಲು), ಚೇರ್ತಲ ಜಿ ಕೃಷ್ಣ ಕುಮಾರ (ಮೃದಂಗ), ಉಡುಪಿ ಶ್ರೀಧರ (ಘಟಂ), ಪಯ್ಯನ್ನೂರು ಗೋವಿಂದ ಶರ್ಮ (ಮೋಸಿರ್ಂಗ್) ಸಹಕರಿಸುವರು.

