ಕಾಸರಗೋಡು: ಮುದ್ರಣ ಕ್ಷೇತ್ರದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇರಳ ಪ್ರಿಂಟರ್ಸ್ ಅಸೋಸಿಯೇಶನ್ (ಕೆಪಿಎ) ನೇತೃತ್ವದಲ್ಲಿ ರಾಜ್ಯಾದ್ಯಂತ ಮುಷ್ಕರ ನಡೆಸಲು ತೀರ್ಮಾನಿಸಲಾಯಿತು. ಮುಷ್ಕರದ ಅಂಗವಗಿ ಕೆ.ಪಿ.ಎ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಜ. 31ರಂದು ಬೆಳಗ್ಗೆ 11ರಿಂದ ಪಿಲಿಕುಂಜೆ ನಗರಸಭಾಂಗಣ ಬಳಿ ಪ್ರತಿಭಟನಾ ಧರಣಿ ನಡೆಯಲಿದೆ.
ಧರಣಿ ಪೂರ್ವಭಾವಿಯಾಗಿ ಪ್ರತಿಭಟನಾ ಮೆರವಣಿಗೆ ಪಿಲಿಕುಂಜೆಯಿಂದ ಹಳೇ ಬಸ್ ನಿಲ್ದಾಣ, ಮುಖ್ಯ ಅಂಚೆ ಕಚೇರಿ ಸಾಗಿ ಪ್ರತಿಭಟನೆ ನಡೆಯಲಿದೆ. ಅಂದು ಮಧ್ಯಾಹ್ನದವರೆಗೆ ಜಿಲ್ಲೆಯ ಮುದ್ರಣಾಲಯಗಳನ್ನು ಬಂದ್ ಮಾಡಲಾಗುವುದು ಎಂದು ಸಂಘಟನೆ ರಾಜ್ಯಾಧ್ಯಕ್ಷ ವೈ. ವಿಜಯನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇರಳದಲ್ಲಿ ಮಾತ್ರವಲ್ಲ, ಭಾರತದಲ್ಲಿಯೇ ಮುದ್ರಣ ಉದ್ಯಮವು ಕಳೆದ ಕೆಲವು ವರ್ಷಗಳಿಂದ ದೊಡ್ಡ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. 2005ರಲ್ಲಿ ತೆರಿಗೆ ಮುಕ್ತ ಮುದ್ರಣ ವಲಯದ ಬದಲು ವ್ಯಾಟ್ ಜಾರಿಗೊಳಿಸಿದಾಗ ಶೇ.5ರಷ್ಟು ತೆರಿಗೆ ವಿಧಿಸಲಾಗಿತ್ತು. 2017 ರಲ್ಲಿ ಜಿ.ಎಸ್.ಟಿ ಬಂದಾಗ, ಹೆಚ್ಚಿನ ಮುದ್ರಿತ ಉತ್ಪನ್ನಗಳ ಮೇಲಿನ ತೆರಿಗೆ ದರವು 5 ಶೇಕಡಾದಿಂದ 12 ಶೇಕಡಾ ಹೆಚ್ಚಳವುಂಟಾಯಿತು. 2021 ರಿಂದ ಜಿಎಸ್‍ಟಿ ದರ 18 ಶೇಕಡಾ ಹೆಚ್ಚಳಗೊಂಡಿದ್ದು, ಮುದ್ರಣ ಉದ್ಯಮ ಮತ್ತು ಗ್ರಾಹಕರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಮುಖ್ಯ ಕಚ್ಚಾವಸ್ತುವಾಗಿರುವ ನ್ಯೂಸ್‍ಪ್ರಿಂಟ್ ಮೇಲಿನ ಜಿಎಸ್‍ಟಿ ತೆರಿಗೆ ದರ ಶೇ. 18ರಿಂದ 12ಕ್ಕೆ ಕಡಿತಗೊಳಿಸಬೇಕು ಎಂಬುದು ಪ್ರಮುಖ ಅವಶ್ಯಕತೆಯಾಗಿದೆ. ಇಂಧನ ಬೆಲೆ, ವಿದ್ಯುತ್ ದರ ಹೆಚ್ಚಳ ಮತ್ತು ಇತರ ಸಾಮಾನ್ಯ ವೆಚ್ಚಗಳು ಹೆಚ್ಚಳಗೊಂಡಿರುವುದರಿಂದ ಮುದ್ರಣ ಕ್ಷೇತ್ರದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ ಎಂದು ತಿಳಿಸಿದರು.
ಧರಣಿಯಲ್ಲಿ ರಾಜಕೀಯ, ಸಾಂಸ್ಕøತಿಕ ಮುಖಂಡರು ಭಾಗವಹಿಸಲಿದ್ದಾರೆ. ಕಾಸರಗೋಡು ನಗರಸಭಾ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ಬಾಸ್ ಬೀಗಂ ಉದ್ಘಾಟಿಸುವರು. ಕೆಪಿಎ ರಾಜ್ಯ ಸಮಿತಿ ಉಪಾಧ್ಯಕ್ಷ ಮುಜೀಬ್ ಅಹಮ್ಮದ್ ವಿಷಯ ಮಂಡಿಸುವರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಟಿ.ಪಿ., ರಾಜ್ಯ ಉಪಾಧ್ಯಕ್ಷ ಮುಜೀಬ್ ಅಹ್ಮದ್, ಜಿಲ್ಲಾ ಕಾರ್ಯದರ್ಶಿ ರೆಗಿ ಮ್ಯಾಥ್ಯೂ, ಕಾಞಂಗಾಡು ವಲಯ ಅಧ್ಯಕ್ಷ ಜಯರಾಮ್ ನೀಲೇಶ್ವರ, ಕಾರ್ಯದರ್ಶಿ ಜಿತು ಪನಯಾಲ್, ಕಾಸರಗೋಡು ವಲಯ ಕಾರ್ಯದರ್ಶಿ ಸಿರಾಜುದ್ದೀನ್ ಮುಜಾಹಿದ್, ಜಿಲ್ಲಾ ಕೋಶಾಧಿಕಾರಿ ಮೊಯಿನುದ್ದೀನ್ ಉಪಸ್ಥಿತರಿದ್ದರು.

