ಕಾಸರಗೋಡು: ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಅಗಲ್ಪಾಡಿ ವೇದಮಾತಾ ಟ್ರಸ್ಟ್ ವತಿಯಿಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ಅಷ್ಟೋತ್ತರ ಶತಕಲಶಾಭಿಷೇಕ, ಅಷ್ಟೋತ್ತರ ಸಹಸ್ರ ನಾಳಿಕೇರ ಗಣಪತಿ ಯಾಗ, ಋಕ್‍ಸಂಹಿತಾ ಯಾಗ, ಐಕಮತ್ಯಹೋಮ, ರುದ್ರಹೋಮ, ಧನ್ವಂತರೀ ಹೋಮ ಮತ್ತು ಸಹಸ್ರ ಚಂಡಿಕಾ ಯಾಗ ಮಾ 26ರಿಂದ ಏ. 3ರ ವರೆಗೆ ದೇವಸ್ಥಾನದಲ್ಲಿ ಜರುಗಲಿರುವುದಾಗಿ ವೇದ ಮಾತಾ ಟ್ರಸ್ಟ್ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶೃಂಗೇರಿ ತತ್ಕರಕಮಲ ಸಂಜಾತ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹಾಗೂ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಪೂರ್ಣಾನುಗ್ರಹದೊಂದಿಗೆ ಕಾರ್ಯಕ್ರಮ ಜರುಗಲಿದೆ. ವೇದಮೂತಿ ಸತ್ಯಕೃಷ್ಣ ಭಟ್ ಮಂಗಳೂರು ಮುಖ್ಯ ಪುರೋಹಿತರಾಗಿದ್ದು, 150ರಷ್ಟು ಋತ್ವಿಜರು ಯಾಗ ನಡೆಸಿಕೊಡಲಿದ್ದಾರೆ. ಎ. 26ರಂದು ಸಂಜೆ 5ಕ್ಕೆ ಉಗ್ರಾಣ ಮುಹೂರ್ತ, ಹಸಿರುಆಣಿ ಸಮರ್ಪಣಾ ಮೆರವಣಿಗೆ, ದಂಡಿಕಾಯಾಗ ಶಾಲೆಯಲ್ಲಿ ವಾಸ್ತುರಾಕ್ಷೋಘ್ನ ಹೋಮ ನಡೆಯುವುದು. 27ರಂದು ಬೆಳಗ್ಗೆ 5ಕ್ಕೆ ಸಾಮೂಹಿಕ ದೇವಪ್ರಾರ್ಥನೆಯೊಂದಿಗೆ ವಿವಿಧ ವೈದಿಕ ಕಾರ್ಯಕ್ರಮ ಆರಂಭಗೊಳ್ಳುವುದು. 11.30ಕ್ಕೆ ಋಕ್‍ಸಂಹಿತಾ ಯಾಗ ಆರಂಭಗೊಂಡು ಏ. 3ರ ವರೆಗೆ ನಡೆಯುವುದು. 29ರಂದು ಬೆಳಗ್ಗೆ 7ಕ್ಕೆ ಸಹಸ್ರಚಂಡಿಕಾ ಯಾಗಶಾಲಾ ಪ್ರವೇಶ ನಡೆಯುವುದು. ಏ. 3ರಂದು ಬೆಳಗ್ಗೆ 5ಕ್ಕೆ ಅಗ್ನಿಪ್ರತಿಷ್ಠೆ, ಸಹಸ್ರಚಂಡಿಕಾ ಯಾಗಾರಂಭ, 10ಕ್ಕೆ ಋಕ್‍ಸಂಹಿತಾ ಯಾಗದ ಪೂರ್ಣಾಹುತಿ, 11ಕ್ಕೆ ಸಹಸ್ರಚಂಡಿಕಾ ಯಾಗದ ಮಹಾಪೂರ್ಣಾಹುತಿ ನಡೆಯುವುದು. ಪ್ರತಿದಿನ ಸಾಂಸ್ಕøತಿಕ ಕಾರ್ಯಕ್ರಮ ನಡೆಯುವುದು. ಮಾ. 29ರಿಂದ ಏ. 3ರ ವರೆಗೆ ಪ್ರತೀ ದಿನ ಕುಮಾರೀ, ಸುವಾಸಿನೀ ಹಾಗೂ ದಂಪತಿ ಪೂಜೆ ನಡೆಯಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜಿ ಶರ್ಮಾ, ಮಂಗಳೂರು, ಹಣಕಾಸು ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಎಡಪ್ಪಾಡಿ, ಪ್ರಚಾರ ಸಮಿತಿ ಸಂಚಾಲಕ ರಾಜೇಶ್ ಮಾಸ್ಟರ್ ಅಗಲ್ಪಾಡಿ ಉಪಸ್ಥಿತರಿದ್ದರು.

