ಕಾಸರಗೋಡು: ಗಡಿಪ್ರದೇಶ ಕಾಸರಗೋಡಿನಲ್ಲಿ ಕಳೆದ 18 ವರ್ಷಗಳಿಂದ ನಾಡು, ನುಡಿ ಹಾಗೂ ಸಂಸ್ಕøತಿಗಾಗಿ ತನ್ನನ್ನು ತೊಡಗಿಸಿಕೊಂಡಿರುವ 'ರಂಗ ಚಿನ್ನಾರಿ' ಸಂಸ್ಥೆ ವತಿಯಿಂದ ಕಾಸರಗೋಡಿನ ಪ್ರತಿಭೆಗಳಿಗೆ ನಗದು ಬಹುಮಾನದೊಂದಿಗೆ 'ರಂಗ ಚಿನ್ನಾರಿ ಪ್ರಶಸ್ತಿ' ಹಾಗೂ 'ರಂಗ ಚಿನ್ನಾರಿ ಯುವ ಪ್ರಶಸ್ತಿ' ನೀಡಿ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮ ಜರುಗಲಿದೆ.
2023-24ನೇ ಸಾಲಿನ ಪ್ರಶಸ್ತಿಯನ್ನು ರಂಗ ಚಿನ್ನಾರಿಯ ನಿರ್ದೇಶಕರಾದ ಕಾಸರಗೋಡು ಚಿನ್ನಾ, ಸತೀಶ್ಚಂದ್ರ ಭಂಡಾರಿ, ಸತ್ಯನಾರಾಯಣ ಕೆ. ಮತ್ತು ಮನೋಹರ ಶೆಟ್ಟಿ ಘೋಷಿಸಿದ್ದಾರೆ. ಎಡನೀರು ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಸ್ಮರಣಾರ್ಥ ಪ್ರಶಸ್ತಿ'ಗೆ ಕಯ್ಯಾರು ಜೋಡುಕಲ್ಲು ನಿವಾಸಿ, ನಾಲ್ಕು ದಶಕಗಳಿಗೂ ಹೆಚ್ಚುಕಾಲ ವಿವಿಧ ಮೇಳಗಳಲ್ಲಿ ಸ್ತ್ರೀವೇಷಧಾರಿಯಾಗಿ ಜನಮೆಚ್ಚುಗೆ ಪಡೆದಿರುವ ರಾಮ ಜೋಗಿ ಅವರನ್ನು ಆಯ್ಕೆ ಮಾಡಲಾಗಿದೆ. 'ರಂಗ ಚಿನ್ನಾರಿ ಪ್ರಶಸ್ತಿ'ಗೆ ಖ್ಯಾತ ಸ್ಯಾಕ್ಸೋಫೋನ್ ವಾದಕ, ಪ್ರಖ್ಯಾತ ವಾದ್ಯ ಕಲಾವಿದರ ಮನೆತನದ ಚಂದ್ರಶೇಖರ, ಹಾಗೂ ಸಾಹಿತ್ಯ ಮತ್ತು ಕಸೂತಿ ಚಿತ್ರಕಲೆಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಶಶಿಕಲಾ ಬಾಯಾರು, 'ರಂಗ ಚಿನ್ನಾರಿ ಯುವ ಪ್ರಶಸ್ತಿ'ಗೆ ಉತ್ತಮ ಸಂಘಟಕ, ಕನ್ನಡಪರ ಹೋರಾಟಗಳಲ್ಲಿನ ಯುವ ಮುಂಚೂಣಿ ನಾಯಕ, ಎಂ.ಎ ಬಿ.ಇಡಿ ಪದವೀಧರ, ಕಾರ್ತಿಕ್ ಪಡ್ರೆ ಹಾಗೂ ಬಹುಮುಖ ಪ್ರತಿಭೆಯ, ಚಂಪೂ ಪ್ರಭಾಷಣ, ನೃತ್ಯ,ಅಭಿನಯ, ಕರಕುಶಲಕಲೆಗಳಲ್ಲಿ ನಿಷ್ಣಾತೆ, ರಾಜ್ಯಮಟ್ಟದ ಪ್ರಶಸ್ತಿವಿಜೇತೆ ಕುಮಾರಿ ಶಿವಾನಿ ಕೆ. ಕೂಡ್ಲು ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಮಾ. 30ರಂದು ಸಂಜೆ 4.30ಕ್ಕೆ ಕಾಸರಗೋಡಿನ ಕರಂದಕ್ಕಾಡಿನಲ್ಲಿರುವ ಪದ್ಮಗಿರಿ ಕಲಾ ಕುಟೀರದಲ್ಲಿ ಗಣ್ಯರ ಸಮ್ಮುಖದಲ್ಲಿ ನಡೆಯಲಿರುವುದು.


