ಪೆರ್ಲ: ಯಕ್ಷಗಾನದ ಪರಂಪರೆಯನ್ನು ಉನ್ನತಿಗೇರಿಸುತ್ತಿರುವ ಸಂಸ್ಥೆಗಳಲ್ಲಿ ಪೆರ್ಲದ ಪಡ್ರೆ ಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಮುಂಚೂಣಿಯಲ್ಲಿರುವುದಾಗಿ ಕೇಂದ್ರದ ಗೌರವಾಧ್ಯಕ್ಷ ಎನ್.ಕೆ ರಾಮಚಂದ್ರ ಭಟ್ ಪನೆಯಾಲ ತಿಳಿಸಿದ್ದಾರೆ.
ಅವರು ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಪಡ್ರೆ ಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ವತಿಯಿಂದ ಆಯೋಜಿಸಲಾದ ಯಕ್ಷ ನೃತ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣ ಶ್ಯಾನುಭಾಗ್ ಸಮಾರಂಭ ಉದ್ಘಾಟಿಸಿದರು. ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಉಪಾಧ್ಯಕ್ಷ ಪುರುಷೋತ್ತಮ ಪೆರ್ಲ, ಕೇಂದ್ರದ ಸಂಚಾಲಕ ಸಬ್ಬಣಕೋಡಿ ರಾಮಭಟ್, ತೆಂಕು-ಬಡಗು ಯಕ್ಷಗಾನ ಭಾಗವತರಾದ ಡಾ. ಸತ್ಯನಾರಾಯಣ ಪುಣಿಂಚಿತ್ತಾಯ, ಯಕ್ಷಕಲಾ ಪೋಷಕರಾದ ಡಾ. ವಿಷ್ಣುಪ್ರಸಾದ್ ಬರೆಕರೆ, ಶಿವರಾಮ ಮಾಸ್ಟರ್, ಹರಿಪ್ರಸಾದ್ ಮಾಸ್ಟರ್, ಚಂದ್ರಹಾಸ ಮಾಸ್ಟರ್ ಉಪಸ್ಥಿತರಿದ್ದರು. ಸಂಸ್ಥೆ ಬಾಲ ಕಲಾವಿದರಿಂದ ಕಿರಾತ ನೃತ್ಯ, ರಂಬಾದಿನಾರಿಯರ ನರ್ತನ, ಸಬ್ಬಣಕೋಡಿ ರಾಮ ಭಟ್ ಅವರಿಂದ ದೇವೇಂದ್ರನ ಒಡ್ಡೋಲಗದ ವೈಭವ ಗಮನಸೆಳೆಯಿತು. ಹಿಮ್ಮೇಳಕಲಾವಿದರಗಿ ಸಂಸ್ಥೆಯ ಬಾಲ ಕಲಾವಿದರು ಉತ್ತಮ ಪ್ರದಶ್ನ ನೀಡಿದರು.
ಇಂದು ನೃತ್ಯ ನೈವೇದ್ಯ:
23ರಂದು ನಡುದೀಪೋತ್ಸವ ಅಂಗವಾಗಿ ಬೆಳಗ್ಗೆ ಶ್ರೀದೇವರ ಬಲಿ, ನವಕಾಭಿಷೇಕ, ಸಂಜೆ 6.30ಕ್ಕೆ ನಾಟ್ಯನಿಲಯಂ ಬಾಲಕೃಷ್ಣ ಮಂಜೇಶ್ವರ ಮತ್ತು ಶಿಷ್ಯ ವೃಂದದಿಂದ ನೃತ್ಯ ನೈವೇದ್ಯ, ರಾತ್ರಿ 8ಕ್ಕೆ ನಡುದೀಪೋತ್ಸವ, ಶ್ರೀದೇವರ ಪಡುಭಾಗ ಸವಾರಿ, ಕಟ್ಟೆಪೂಜೆ ನಡೆಯುವುದು.





