ಕಾಸರಗೋಡು: ದೀರ್ಘಕಾಲದಿಂದ ಹದಗೆಟ್ಟಿರುವ ಮೊಗ್ರಾಲ್‍ಪುತ್ತುರು ಪಂಚಾಯಿತಿಯ ಮೇಲ್‍ಪಾರ-ಮಜಲ್ ರಸ್ತೆಯನ್ನು ಸಂಚಾರಕ್ಕೆ ಯೋಗ್ಯಗೊಳಿಸಬೇಕು ಎಂದು ಆಗ್ರಹಿಸಿ ಜನಪರ ಹೋರಾಟ ಸಮಿತಿ ವತಿಯಿಂದ ಮೇಲ್‍ಪಾರ-ಮಜಲ್ ರಸ್ತೆ ತಡೆ ನಡೆಸಲಾಯಿತು.
ಮೊಗ್ರಾಲಪುತ್ತೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಈ ಪ್ರದೇಶದ ಅಭಿವೃದ್ಧಿ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯವನ್ನು ಕೊನೆಗೊಳಿಸಬೇಕು ಮತ್ತು ಆಡಳಿತ ಮಂಡಳಿಯು ಮಾರ್ಚ್ 31ರ ಒಳಗಾಗಿ ರಸ್ತೆದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ಪ್ರಲಗೊಳಿಸಲಾಗುವುದು. ಪ್ರಸಕ್ತ ರಸ್ತೆ ಅಭಿವೃದ್ಧಿಗೆ ಒಂಬತ್ತು ಲಕ್ಷ ರೂ. ಮಂಜೂರಾಗಿ ಲಭಿಸಿದ್ದರೂ, ಈ ಮೊತ್ತ ವಿನಿಯೋಗಿಸಲು ಪಂಚಾಯಿತಿ ತೋರುವ ವಿಳಂಬ ಧೋರಣೆ ಈ ಪ್ರದೇಶದ ಜನತೆಗೆ ಎಸಗಿರುವ ವಂಚನೆಯಾಗಿದೆ ಎಂದು ಜನಪರ ಕ್ರಿಯಾ ಸಮಿತಿ ತಿಳಿಸಿದೆ.
ಮುಷ್ಕರದ ಹಿನ್ನೆಲೆಯಲ್ಲಿ ನಗರಠಾಣೆಗೆ ಗುತ್ತಿಗೆದಾರರು ಹಾಗೂ ಹೋರಾಟ ಸಮಿತಿ ಪದಾಧಿಕಾರಿಗಳನ್ನು ಕರೆಸಿ ಚರ್ಚೆ ನಡೆಸಲಾಯಿತು. ಮಾ. 25ರಂದು ಕಾಮಗಾರಿ ಆರಂಭಿಸುವ ಬಗ್ಗೆ ಶಾಸಕರ ಉಪಸ್ಥಿತಿಯಲ್ಲಿ ನೀಡಿದ ಭರವಸೆಯನ್ವಯ ಧರಣಿ ತಾತ್ಕಾಳಿಕವಾಗಿ ಕೈಬಿಡಲಾಯಿತು.
ರಿಯಾಜ್ ಮಜಲ್, ಸಲೀಂ ಮಜಲ್, ಗಿರೀಶ್ ಮಜಲ್, ಪ್ರಮೀಳಾ ಮಜಲ್, ಅನ್ವರ್ ಕಲ್ಲಂಗೈ, ರಹೀಮ್ ಮಜಲ್, ಹನೀಫ್ ಬದ್ರಿಯಾ, ಕರೀಂ ಮೇಲ್ಪಾರ, ಮುನೀರ್ ಮಜಲ್, ಅಶ್ರಫ್ ಮಜಲ್, ಯಾಹಿಯಾ ಮಜಲ್, ಸಾಬೀರ್ ಮಜಲ್, ಧನೇಶ್ ಮಜಲ್‍ಮೊದಲಾದವರು ಧರಣಿಯಲ್ಲಿ ಭಾಗವಹಿಸಿದ್ದರು.


