ಕುಂಬಳೆ: ಜಿಲ್ಲೆಯ ವಿವಿದೆಡೆ ನಿರಂತರವಾಗಿ ಪ್ರತೀ ವರ್ಷವೂ ಕಡಲ್ಕೊರೆತ ಸಂಭವಿಸುತ್ತಿದ್ದು, ಹಲವಾರು ಮಂದಿ ಮನೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದಾರೆ. ಕಡಲ್ಕೊರೆತ ಪರಿಹಾರಕ್ಕೆ ಸಮಗ್ರ ಅಧ್ಯಯನ ನಡೆಸಬೇಕೆಂದು ಮೊಗ್ರಾಲ್ ದೇಶಿಯವೇದಿ ಆಗ್ರಹಿಸಿದೆ. ಸಮುದ್ರ ಕಿನಾರೆಯ ಜನರ ಸಂರಕ್ಷಣೆಗೆ ಸಮಗ್ರ ಯೋಜನೆಯನ್ನು ರೂಪಿಸಿ ಸಾಕಾರಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.
ಮಳೆಗಾಲ ಆರಂಭದೊಂದಿಗೆ ಸಮುದ್ರ ಕಿನಾರೆಯ ನಿವಾಸಿಗಳು ಪ್ರತೀ ವರ್ಷ ವಿವಿಧ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಮೀನುಗಾರಿಕೆ ಕಾರ್ಮಿಕರು ಸಹಿತ ಕಿನಾರೆ ಜನರು ಅನುಭವಿಸುತ್ತಿರುವ ಸಂಕಷ್ಟ ಹಲವು. ಮಂಜೇಶ್ವರದಿಂದ ವಲಿಯಪರಂಬದ ವರೆಗಿನ ಸುಮಾರು 85 ಕಿ.ಮೀ. ಸಮುದ್ರ ಕಿನಾರೆಯಲ್ಲಿ ಪ್ರತೀ ವರ್ಷ ಕಡಲ್ಕೊರೆತದಿಂದಾಗಿ ಕಿನಾರೆಯಲ್ಲಿ 200 ರಿಂದ 300 ಮೀಟರ್‍ನಷ್ಟು ಸ್ಥಳ ಸಮುದ್ರ ಪಾಲಾಗುತ್ತಿದೆ. ಮನೆ, ತೆಂಗಿನ ಮರ, ರಸ್ತೆ, ವಿದ್ಯುತ್ ಕಂಬ ಹಾನಿಗೀಡಾಗುತ್ತಿದೆ. ಇದರಿಂದ ಕರಾವಳಿ ಪ್ರದೇಶದಲ್ಲಿ ಕೋಟ್ಯಾಂತರ ರೂ. ನಾಶನಷ್ಟ ಸಂಭವಿಸುತ್ತಿದೆ. ಕಡಲ್ಕೊರೆತ ನಿವಾರಿಸಲು ಸಣ್ಣಪುಟ್ಟ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ, ಅದರಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ಜಿಲ್ಲೆಯಲ್ಲಿ ಕಡಲ್ಕೊರೆತ ನಿವಾರಿಸಲು ವಿಧಾನಸಭಾ ಸಮಿತಿ ಭೇಟಿ ನೀಡಿದ್ದರೂ ಸರ್ಕಾರಕ್ಕೆ ಸೂಕ್ತ ಯೋಜನೆಯನ್ನು ಸಾಕಾರಗೊಳಿಸಲು ಸಾಧ್ಯವಾಗಿಲ್ಲ.
ಈ ಹಿನ್ನೆಲೆಯಲ್ಲಿ ಕಡಲ್ಕೊರೆತ ಪರಿಹರಿಸಲು ಸಮಗ್ರ ಯೋಜನೆಯನ್ನು ಸಾಕಾರಗೊಳಿಸಬೇಕೆಂದು ಮೊಗ್ರಾಲ್ ದೇಶಿಯವೇದಿ ಆಗ್ರಹಿಸಿದೆ. ಸಂಸದರು ಸಹಿತ ಕೇಂದ್ರ ಸರ್ಕಾರದ ನಿಯೋಗ ಕಡಲ್ಕೊರೆತ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ.



.jpg)
