ಕಾಸರಗೋಡು: ಮಧೂರು ಸನಿಹದ ಅರಂತೋಡು ನಿವಾಸಿ ಫೆಲಿಕ್ಸ್ ರಾಡ್ರಿಗಸ್ ಎಂಬವರ ಮನೆಯಿಂದ ಎಂಟು ಪವನು ಚಿನ್ನಾಭರಣ ಹಾಗೂ 60ಸಾವಿರ ರೂ. ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ನೆರೆಮನೆ ನಿವಾಸಿ ರಾಬರ್ಟ್ ರಾಡ್ರಿಗಸ್ ಎಂಬಾತನನ್ನು ವಿದ್ಯಾಣಗರ ಠಾಣೆ ಪೊಲಿಸರು ಬಂಧಿಸಿದ್ದಾರೆ.
ಫೆಲಿಕ್ಸ್ ರಾಡ್ರಿಗಸ್ ಮತ್ತು ಮನೆಯವರು ಕೆಲಸಕ್ಕೆ ತೆರಳಿದ್ದ ಸಂದರ್ಭ ಮನೆಗೆ ನುಗ್ಗಿದ್ದ ಆರೋಪಿ ನಗ, ನಗದು ದೋಚಿದ್ದಾನೆ. ಕೆಲವು ದಿವಸಗಳ ಹಿಂದೆ ಕಳವು ನಡೆದಿದ್ದು, ಕಪಾಟಿನಲ್ಲಿರಿಸಿದ್ದ ಚಿನ್ನಾಭರಣ ಹಾಗೂ ನಗದು ನಾಪತ್ತೆಯಾಗಿರುವ ಬಗ್ಗೆ ಮನೆಯವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಸಂಶಯದ ಆಧಾರದಲ್ಲಿ ರಾಬರ್ಟ್ ರಾಡ್ರಿಗಸ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಳವು ಬೆಳಕಿಗೆ ಬಂದಿದೆ.ಮನೆಗೆ ನುಗ್ಗಿ, ಕೊಠಡಿಯಲ್ಲಿರಿಸಿದ್ದ ಕಪಾಟಿನ ಕೀಲಿಕೈ ಬಳಸಿ ಕಳವು ನಡೆಸಿದ್ದಾನೆ. ಈತ ಅಬಕಾರಿ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.




