ಕಾಸರಗೋಡು:ಹಲವು ಮಂದಿಗೆ ಉದ್ಯೋಗಭರವಸೆ ನೀಡಿ, ಅವರಿಂದ ಲಕ್ಷಾಂತರ ರೂ. ಪಡೆಯುವ ಮೂಲಕ ವಂಚನಾಜಾಲದ ಪ್ರಮುಖ ರೂವಾರಿ ಡಿವೈಎಫ್‍ಐ ಮಾಜಿ ನೇತಾರೆ, ಶಿಕ್ಷಕಿ ಸಚಿತಾ ರೈ ವಿರುದ್ಧ ಕೇಂದ್ರೀಯ ತನಿಖಾ ಏಜನ್ಸಿಗಳಿಂದ ತನಿಖೆ ನಡೆಸುವಂತೆ ಹಣಕಳೆದುಕೊಂಡ ಸಂತ್ರಸ್ತರ ಪ್ರತಿನಿಧಿ ಲೋಕೇಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.
ಮೇಲ್ನೋಟಕ್ಕೆ ಸಚಿತಾ ರೂ. ನಡೆಸಿರುವ ಕೃತ್ಯ ಕೆಲವು ಲಕ್ಷಗಳಿಗೆ ಸೀಮಿತವಾಗಿ ಕಂಡರೂ, ಬಹುಕೋಟಿ ಹಗರಣ ಇದಾಗಿದೆ. ಈಕೆಯೊಂದಿಗೆ ಇನ್ನೂ ಹಲವರು ವಂಚನಾಜಾಲದಲ್ಲಿ ಶಾಮೀಲಾಗಿದ್ದು, ಇವರನ್ನೂ ಪ್ರಕರಣದಲ್ಲಿ ಒಳಪಡಿಸಿ ತನಿಖೆ ನಡೆಸಬೇಕಾಗಿದೆ. ಜಿಬಿನ್‍ಅಶೋಕ್, ನಯನಾ, ಅಶ್ವತಿ, ಉಷಾ ಸೇರಿದಂತೆ ಕೆಲವೊಂದು ಹೆಸರು ವಂಚನಾಜಾಲದಲ್ಲಿ ಕೇಳಿಬರುತ್ತಿದ್ದು, ಇವರನ್ನೂ ತನಿಖೆಗೆ ಒಳಪಡಿಸಬೇಕಾಗಿದೆ.
ಸಚಿತಾ ರೈ ವಿರುದ್ಧ ಮಂಜೇಶ್ವರ, ಕುಂಬಳೆ, ಬದಿಯಡ್ಕ, ಕಾಸರಗೋಡು, ಮೇಲ್ಪರಂಬ, ಹೊಸದುರ್ಗ ಅಲ್ಲದೆ ದ.ಕ ಜಿಲ್ಲೆಯ ಉಪ್ಪಿನಂಗಡಿ ಠಾಣೆಯಲ್ಲೂ ಕೇಸು ದಾಖಲಾಗಿದೆ. 20ಕ್ಕೂ ಹೆಚ್ಚು ಕೇಸುಗಳಲ್ಲಿ ಆರೋಪಿಯಾಗಿರುವ ಸಚಿತಾ ರೈ ಪತಿ ಜಿಬಿನ್‍ಅಶೋಕ್ ಮಾಸ್ಟರ್ ಮೈಂಡ್ ಆಗಿದ್ದು, ಈತನ ನಿರ್ದೇಶನದಲ್ಲೇ ವಂಚನಾಜಾಲ ವ್ಯಾಪಿಸಿದೆ. ಸ್ಥಳೀಯ ಪೊಲೀಸರು ಪ್ರಕರಣದ ತನಿಖೆಗೆ ಹೆಚ್ಚಿನ ಉತ್ಸಾಹ ತೋರದಿರುವುದರಿಂದ ಹಣಕಳೆದುಕೊಂಡವರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಬಹುತೇಕ ಮಂದಿ ಸಾಲಮಾಡಿ, ಚಿನ್ನ ಅಡವಿರಿಸಿ ಹಣ ಸಂದಾಯಮಾಡಿದವರಿದ್ದಾರೆ. ಹಣಕಳೆದುಕೊಂಡ ಉದ್ಯೋಗಾಕಾಂಕ್ಷಿ ಯುವತಿಯ ತಾಯಿ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾದ ಘಟನೆ ಪಳ್ಳತ್ತಡ್ಕದಲ್ಲಿ ನಡೆದಿದೆ.
ಈ ಬೃಹತ್ ವಂಚನಾಜಾಲವನ್ನು ಬೇಧಿಸಲು ಕೇಂದ್ರ ತನಿಖಾ ಸಂಸ್ಥೆಯ ಜತೆಗೆ ಇಡಿ, ಆರ್ಥಿಕ ಅಪರಾಧ ತನಿಖಾ ಸಂಸ್ಥೆಗಳು ಸಮಗ್ರ ತನಿಖೆ ನಡೆಸಬೇಕಾಗಿದೆ ಎಂದು ಲೋಕೇಶ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಲೇಶ್ ಬಾಡೂರು, ಮೋಕ್ಷಿತ್ ಶೆಟ್ಟಿ, ನಿಶ್ಮಿತಾ ಉಪಸ್ಥಿತರಿದ್ದರು.




