ಕಾಸರಗೋಡು: ಭಾರತೀಯ ಪ್ರಜಾಪ್ರಭುತ್ವದ ಬೆನ್ನೆಲುಬಾಗಿರುವ ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹಿರಿಯ ವಿಭಾಗ ಸಿವಿಲ್‍ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ರುಕ್ಮಾ ಎಸ್ ರಾಜ್ ತಿಳಿಸಿದರು.
ಅವರು ಪೆರಿಯ ಡಾ. ಅಂಬೇಡ್ಕರ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ ಕಾಸರಗೋಡು ನೇತೃತ್ವದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅಂಬೇಡ್ಕರ್ ಕಲಾ ಮತ್ತು ವಿಜ್ಞಾನ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಜಾತ್ಯತೀತತೆ ಮತ್ತು ಸಮಾಜವಾದವು ಸಂವಿಧಾನದ ಮೂಲ ಸ್ವರೂಪದೊಂದಿಗೆ ಬೆಸೆದುಕೊಂಡಿದೆ. ಕಾನೂನು ಹೇರಿಕೆಗಿಂತ ಸಮಾಜದ ಜವಾಬ್ದಾರಿಯಾಗಿ ಸ್ವೀಕರಿಸಿದಾಗ ಪ್ರಜಾಪ್ರಭುತ್ವ ಬಲಗೊಳ್ಳಲು ಕಾರಣವಾಗುವುದಾಗಿ ತಿಳಿಸಿದರು. ಈ ಸಂದರ್ಭ ಸಂವಿಧಾನದ ಪ್ರಸ್ತಾವನೆಯನ್ನು ರುಕ್ಮಾ ಎಸ್ ರಾಜ್ ಓದಿದರು. ಜಿಲ್ಲಾ ವಾರ್ತಾಧಿಕಾರಿ ಎಂ ಮಧುಸೂದನನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜು ಪ್ರಾಂಶುಪಾಲ ಡಾ.ಜಯಚಂದ್ರನ್ ಕೀಯೋತ್ ಅಧ್ಯಕ್ಷತೆ ವಹಿಸಿದ್ದರು. ವಕೀಲ ಗಂಗಾಧರನ್ ಕುಟ್ಟಮತ್ ಸಂವಿಧಾನದ ಬಗ್ಗೆ ತರಗತಿ ನಡೆಸಿದರು. ಡಾ.ಅಂಬೇಡ್ಕರ್ ವಿದ್ಯಾನಿಕೇತನ ಪ್ರಾಂಶುಪಾಲ ಪಿ.ಸುನೀಲಕುಮಾರ್, ಟ್ರಸ್ಟ್ ಆಡಳಿತಾಧಿಕಾರಿ ಬಿಪುಲಾ ರಾಣಿ, ಕಾಲೇಜಿನ ಆಡಳಿತಾಧಿಕಾರಿ ಕೆ.ವಿ.ಸಾವಿತ್ರಿ ಹಾಗೂ ಕಾಲೇಜು ಒಕ್ಕೂಟದ ಅಧ್ಯಕ್ಷೆ ವಿ.ಅಶ್ವತಿ ಉಪಸ್ಥಿತರಿದ್ದರು. ಜಿಲ್ಲಾ ಯುವ ಅಧಿಕಾರಿ ಪಿ. ಅಖಿಲ್ ಸ್ವಾಗತಿಸಿದರು. ಕಾಲೇಜಿನ ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಸಿ.ಶಿಜಿತ್ ವಂದಿಸಿದರು. ಸಂವಿಧಾನ ದಿನಾಚರಣೆ ಅಂಗವಾಗಿ ಕಾಲೇಝಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಸಂವಿಧಾನ ರಕ್ಷಣಾ ಜಾಗ್ರತಿ ಮೆರವಣಿಗೆ ನಡೆಯಿತು.





