ಕುಂಬಳೆ: ಅಮಿತ ವೇಗದಲ್ಲಿ ವಿದ್ಯಾರ್ಥಿಗಳು ಸಂಚರಿಸಿದ ಥಾರ್ ಜೀಪ್ ಡಿವೈಡರ್ ಮೇಲೆ ಪಲ್ಟಿಯಾಗಿ ಅಪಘಾತ ಸಂಭವಿಸಿದ ಘಟನೆ ಕುಂಬಳೆ ನಾರಾಯಣಮಂಗಲದಲ್ಲಿ ನಡೆದಿದೆ. ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಕುಂಬಳೆ-ಮುಳ್ಳೇರಿಯಾ ಕೆಎಸ್‍ಟಿಪಿ ರಸ್ತೆಯ ನಾರಾಯಣಮಂಗಲದಲ್ಲಿ ಈ ಅಪಘಾತ ಸಂಭವಿಸಿದೆ. ಉಪ್ಪಳ ಪತ್ವಾಡಿಯ ಜಾಹಿದ್, ಮುಳಿಯಡ್ಕದ ಅಫ್ ಲಾಲ್, ಬಂಬ್ರಾಣದ ಕಾಶಿಫ್ ಮತ್ತು ರುಮೈದ್ ಗಾಯಗೊಂಡಿದ್ದಾರೆ. ಇವರಲ್ಲಿ ಸಾಹಿದ್ ಮತ್ತು ರುಮೈದ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತಿಬ್ಬರನ್ನು ಕುಂಬಳೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೇಣಿಯಲ್ಲಿ ನಿನ್ನೆ ಸಂಜೆ ನಡೆದ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದ ವಿದ್ಯಾರ್ಥಿಗಳು ಸಂಚರಿಸಿದ್ದ ಜೀಪು ಅವಘಡಕ್ಕೀಡಾಯಿತು. ವಾಹನದಲ್ಲಿ ಆರು ಮಂದಿಗಳಿದ್ದರು. ಅಪಘಾತ ಸಂಭವಿಸಿದಾಗ ಇಬ್ಬರು ಓಡಿ ಬಚಾವಾಗಿದ್ದಾರೆ. ಅಪಘಾತದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಕುಂಬಳೆ ಇನ್ಸ್ ಪೆಕ್ಟರ್ ಕೆ.ಪಿ.ವಿನೋದ್ ಕುಮಾರ್ ಹಾಗೂ ಎಸ್ ಐ ಕೆ.ಶ್ರೀಜೇಶ್ ಸ್ಥಳೀಯರ ನೇತೃತ್ವದಲ್ಲಿ ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಇನ್ಸ್ ಪೆಕ್ಟರ್ ಕೆ.ಪಿ.ವಿನೋದ್ ಕುಮಾರ್, ಎಸ್‍ಐಕೆ ಶ್ರೀಜೇಶ್ ಮತ್ತು ಸ್ಥಳೀಯ ಜನರು ಗಾಯಗೊಂಡ ವಿದ್ಯಾರ್ಥಿಗಳನ್ನು ನಾಲ್ಕು ಆಂಬ್ಯುಲೆನ್ಸ್‍ಗಳಲ್ಲಿ ಆಸ್ಪತ್ರೆಗಳಿಗೆ ಕರೆದೊಯ್ದರು.





