ಕಾಸರಗೋಡು: ಉತ್ತರ ಕೇರಳ ಮತ್ತು ದಕ್ಷಿಣ ಕರ್ನಾಟಕದಲ್ಲಿ ನ್ಯಾಯದೇಗುಲವಾಗಿ ಖ್ಯಾತಿಗಳಿಸಿರುವ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ಡಿ.27 ರಿಂದ 2025 ರ ಜನವರಿ 2ರ ವರೆಗೆ ಬ್ರಹ್ಮಶ್ರೀ ಇರಿವಯಿಲ್ ಕೇಶವ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವುದಾಗಿ ದೇವಸ್ಥಾನ ಟ್ರಸ್ಟಿ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ ಬಲರಾಮನ್ ನಾಯರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
27ರಂದು ಸಂಜೆ 4ಕ್ಕೆ ನಾಲ್ವರ್ ದೈವಗಳ ಕಳಿಯಾಟ ಉತ್ಸವದ ಆರಂಭದ ಹಿನ್ನೆಲೆಯಲ್ಲಿ ಕನಕತೂರು ಅರಮನೆ, ಕಳರಿ ವೀಡು, ಪಡಿಪುರ ಮತ್ತು ಬನದಲ್ಲಿ ಶುದ್ಧೀಕರಣ ಮತ್ತು ಪ್ರಾರ್ಥನೆ ನಡೆಯುವುದು. ಡಿಸೆಂಬರ್ 28ರ ಶನಿವಾರ ಬೆಳಗ್ಗೆ ಕಳರಿ ಮತ್ತು ಆನೆ ಚಪ್ಪರದ ಅಲಂಕಾರ, ಮಧ್ಯಾಹ್ನ 3ಕ್ಕೆ ಮೂಲಸ್ಥಾನದಿಂದ ಭಂಡಾರದ ಆಗಮನ ಸಂಜೆ 7ಕ್ಕೆ ಇಳಯೋರ್ ದೇವರ ದರ್ಶನ ನಡೆಯುವುದು. 29ರಂದು ಬೆಳಗ್ಗೆ 4ಕ್ಕೆ ಶ್ರೀ ಚಾಮುಂಡಿ ದೇವರ ದರ್ಶನ, ವಿವಿಧ ದೈವಗಳ ನರ್ತನ ಸೇವೆ ನಡೆಯುವುದು. 30, 31 ಮತ್ತು ಜನವರಿ 1ರಂದು ಹಗಲು, ರಾತ್ರಿ ಕಾಲಾವಧಿಯಲ್ಲಿ ಇಳಯೋರ್, ಮೂತ್ತೋರ್, ಪಂಚುರ್ಲಿ, ಬಂಬೇರಿಯನ್, ಮಾಣಿಚಿ, ಕುಂಡಕಲಯನ್, ರಕ್ತೇಶ್ವರಿ, ವಿಷ್ಣುಮೂರ್ತಿ, ಪಾಷಾಣಮೂರ್ತಿ ಸೇರಿದಂತೆ ವಿವಿಧ ದೈವಗಳ ನರ್ತನ ಸಏವೆ ನಡೆಯುವುದು. ಜನವರಿ 2 ರಂದು ಕಳಿಯಾಟ ಮಹೋತ್ಸವ ಸಂಪನ್ನಗೊಳ್ಳುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಪಿ. ಮುರಳೀಧರನ್ ನಾಯರ್, ಕೆ.ಪಿ. ಬಾಲಚಂದ್ರನ್ ನಾಯರ್, ಕೆ.ಪಿ. ಜ್ಯೋತಿ ಚಂದ್ರನ್, ಕೆ.ಪಿ. ಜಯಕೃಷ್ಣನ್, ಕೆ.ಪಿ ಶ್ರೀಜಿತ್, ಕೆಪಿ ಚಿದಾನಂದನ್, ವಿ.ವಿ. ಪ್ರಭಾಕರನ್, ಎಂ. ರಾಘವನ್ ನಾಯರ್, ರಾಮಕೃಷ್ಣನ್ ಎರಿಞÂಪುಯ ಉಪಸ್ಥಿತರಿದ್ದರು.




.jpeg)
