ಪೆರ್ಲ: ಹಿಂದೂ ಸಮಾಜದ ಮೇಲಿನ ದೌರ್ಜನ್ಯ ತಡೆಗೆ ಧಾರ್ಮಿಕ ಪ್ರಜ್ಞೆ ಮೈಗೂಡಿಸಿಕೊಳ್ಳುವುದರ ಜತೆಗೆ ಎಲ್ಲ ಸಮುದಾಯ ಒಗ್ಗಟ್ಟಾಗಿ ಮುಂದುವರಿಯುವ ಅನಿವಾರ್ಯತೆಯಿದೆ ಎಂಬುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದರು.
ಅವರು ಪೆರ್ಲ ಶ್ರೀ ಅಯ್ಯಪ್ಪ ಸ್ವಾಮಿ ಭಜನಾಮಂದಿರದ 48ನೇ ವಾರ್ಷಿಕೋತ್ಸವ, ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಶ್ರೀ ಅಯ್ಯಪ್ಪ ಭಜನಾಮಂದಿರ ವಠಾರದಲ್ಲಿ ನೂತನವಗಿ ನಿರ್ಮಿಸಲಾದ ಶ್ರೀಧರ್ಮಶಾಸ್ತಾ ಭವನದ ಲೋಕಾರ್ಪಣಾ ಸಮಾರಂಭದ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಭಜನಾಮಂದಿರಗಳು ಭಾವೈಕ್ಯತೆಯ ಸಂಕೇತವಾಗಿದೆ. ಕಲಿಯುಗದಲ್ಲಿ ಶ್ರೀದೇವರನ್ನು ಸಾಕ್ಷಾತ್ಕರಿಸಿಕೊಳ್ಳಲಿರುವ ಸುಲಭ ಮಾರ್ಗಗಳಲ್ಲಿ ಭಜನೆ ಒಂದಾಗಿದೆ ಎಂದು ತಿಳಿಸಿದರು.
ತಿರುವಿಳಕ್ಕ್ ಸಮಿತಿ ಗೌರವಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಶುಳುವಾಲುಮೂಲೆ ಶಿವಸುಬ್ರಹ್ಮಣ್ಯ ಭಟ್ ಅನುಗ್ರಹ ಭಾಷಣ ಮಾಡಿದರು. ಧಾರ್ಮಿಕ ಮುಂದಾಳು ಬಾಲನ್ ಮಾಸ್ಟರ್ ಪರಪ್ಪ ಧಾರ್ಮಿಕ ಭಾಷಣ ಮಾಡಿದರು.
ಉದ್ಯಮಿಗಳಾದ ವಸಂತ ಪೈ ಬದಿಯಡ್ಕ, ಅಶೋಕ್ ಪೈ ಅಮೆಕ್ಕಳ, ಶಿವಶಂಕರ ಭಟ್ ಪೆರ್ಲ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಜಯಶ್ರೀಗುರುಸ್ವಾಮಿಗಳಾದ ಶ್ರೀಧರ ಬಜಕೂಡ್ಲು, ಸೀತಾರಾಮ ಪಳ್ಳತ್ತಡ್ಕ ಉಪಸ್ಥಿತರಿದ್ದರು. ವಿಶ್ಮಿತಾ ಬಜಕೂಡ್ಲು ಪ್ರಾರ್ಥನೆ ಹಾಡಿದರು. ಉದಯ ಸ್ವರ್ಗ ಸ್ವಾಗತಿಸಿದರು. ದೀಕ್ಷಿತ್ ಶೆಟ್ಟಿ ಬಜಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಉದಯ ಶುಭಂ ಪೆರ್ಲ ವಂದಿಸಿದರು.
ಬೆಳಗ್ಗೆ 7.45ರಿಂದ 8.45ರ ಮಧ್ಯೆ ನಡೆದ ಮುಹೂರ್ತದಲ್ಲಿ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಶ್ರೀಧರ್ಮಶಾಸ್ತಾ ಭವನದ ಲೋಕಾರ್ಪಣೆ ನಡೆಸಿದರು. ತಿರುವಿಳಕ್ಕ್ ಕಾರ್ಯಕ್ರಮದ ಅಂಗವಾಗಿ ಇಡಿಯಡ್ಕ ದೇವಸ್ಥಾನ ವಠಾರದಿಂದ ವಿಶೇಷ ಪಾಲೆಕೊಂಬು ಮೆರವಣಿಗೆ, ಭಕ್ತಿ ಗಾನಮೇಳ, ಶ್ರಿ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ನಡೆಯಿತು.






