ಕಾಸರಗೋಡು: ಕನ್ನಡದ ಅವಗಣನೆಯಿಂದಾಗಿ ಕಾಸರಗೋಡಿನ ಕನ್ನಡಿಗರು ಉದ್ಯೋಗ ವಂಚಿತರಾಗುತ್ತಿರುವುದಾಗಿ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಹೇಳಿದರು.
ಅವರು ಕಾಸರಗೋಡಿನ ಕರಂದಕ್ಕಾಡಿನಲ್ಲಿ ಗಣೇಶ್ ಪ್ರಸಾದ್ ಪಾಣೂರು ಸಾರಥ್ಯದಲ್ಲಿ ಆರಂಭಗೊಂಡ ಕೇರಳ ಪಿಎಸ್‍ಸಿ ಉದ್ಯೋಗ ಮಾಹಿತಿ ಕೇಂದ್ರ ಮತ್ತು ಶ್ರೀ ವಿನಾಯಕ ಟೈಪ್ ರೈಟಿಂಗ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಲೋಕಸೇವಾ ಆಯೋಗದ ಪರೀಕ್ಷೆ ಎದುರಿಸಲು ತಯಾರಾಗಬೇಕು. ಈ ನಿಟ್ಟಿನಲ್ಲಿ ಕನ್ನಡಿಗರಿಗಾಗಿ ಪಿಎಸ್‍ಸಿ ಉದ್ಯೋಗ ಮಾಹಿತಿ ಕೇಂದ್ರ ಆರಂಭಿಸುತ್ತಿರುವ ಸಂಘಟಕರ ಕಾರ್ಯ ಸ್ತುತ್ಯರ್ಹವಾಗಿದೆ ಎಂದು ತಿಳಿಸಿದರು.
ಪಿಎಸ್‍ಸಿಯ ನಿವೃತ್ತ ಅಂಡರ್ ಸೆಕ್ರೆಟರಿ ಗಣೇಶ್ ಪ್ರಸಾದ್ ಪಾಣೂರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಡಿ.ಡಿ.ಇ ಮಹಾಲಿಂಗೇಶ್ವರ ರಾಜ್.ಡಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ನಿವೃತ್ತ ಶಿಕ್ಷಕ ನವೀನ್ ಕುಮಾರ್, ವಿಜಯಕುಮಾರಿ.ವಿ, ಉಷಾಕುಮಾರಿ, ಪುನೀತ್ ಕೃಷ್ಣ ಪಾಣೂರು ಉಪಸ್ಥಿತರಿದ್ದರು.
ಶ್ರೀ ವಿನಾಯಕ ಟೈಪ ರೈಟಿಂಗ್ ಸ್ಕೂಲ್ ಪ್ರಾಂಶುಪಾಲ ಕೃಷ್ಣ ಎನ್ ಸ್ವಾಗತಿಸಿದರು. ಕೃಷ್ಣ. ಡಿ ಬೆಳಿಂಜೆ ಕಾರ್ಯಕ್ರಮ ನಿರೂಪಿಸಿದರು. ಶೈಲೇಶ್ ಯು. ಜೆ ವಂದಿಸಿದರು.






