ಖಜುರಾಹೊ: 'ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯನ್ನು ಕಾಂಗ್ರೆಸ್ ನಿರ್ಲಕ್ಷಿಸಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಆರೋಪಿಸಿದರು.
'ಕೆನ್-ಬೆತವಾ' ನದಿ ನೀರು ಜೋಡಣೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಇಲ್ಲಿ ಮಾತನಾಡಿದರು.
ಗೃಹ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್ ಅವರ ಕುರಿತು ನೀಡಿರುವ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.
'ದೇಶದ ಜಲ ಸಂಪನ್ಮೂಲಗಳನ್ನು ಗಟ್ಟಿಗೊಳಿಸುವ ಹಾಗೂ ಅವುಗಳನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಅಂಬೇಡ್ಕರ್ ಅವರ ದೂರದೃಷ್ಟಿಯು ಪ್ರಮುಖ ಕೊಡುಗೆ ನೀಡಿದೆ. ನದಿ ಕಣಿವೆ ಯೋಜನೆಗಳನ್ನು ರೂಪಿಸುವ ಹಾಗೂ ಕೇಂದ್ರ ಜಲ ಆಯೋಗವನ್ನು ಸ್ಥಾಪಿಸುವಲ್ಲಿ ಅಂಬೇಡ್ಕರ್ ಅವರು ಪ್ರಮುಖ ಪಾತ್ರವಹಿಸಿದ್ದಾರೆ' ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
'ಜಲ ಸಂರಕ್ಷಣೆಯು 21ನೇ ಶತಮಾನದ ಬಹುದೊಡ್ಡ ಸವಾಲು. ಸೂಕ್ತವಾದ ಜಲ ನಿರ್ವಹಣೆ ಹಾಗೂ ಜಲಮೂಲಗಳ ಸಂರಕ್ಷಣೆ ಸಾಧ್ಯವಾಗಿಸಿಕೊಳ್ಳುವ ದೇಶಗಳು ಮಾತ್ರ ಈ ಶತಮಾನದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯ. ಆದರೆ, ಕಾಂಗ್ರೆಸ್ ಪಕ್ಷವು ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಜಲ ಸಂರಕ್ಷಕನಾಗಿ ಅಂಬೇಡ್ಕರ್ ಅವರ ಶ್ರಮವನ್ನೂ ಕಾಂಗ್ರೆಸ್ ಗುರುತಿಸಲಿಲ್ಲ' ಎಂದರು.





