ನವದೆಹಲಿ: ಕೇಂದ್ರ ಸರ್ಕಾರ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದೆ. ಹಣಕಾಸು ಸಚಿವಾಲಯ, ಕಂದಾಯ ಸಚಿವಾಲಯಗಳಿಗೆ ನೂತನ ಕಾರ್ಯದರ್ಶಿಗಳನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. 1992 ರ ಬ್ಯಾಚ್ ನ ಬಿಹಾರ ಕೇಡರ್ ನ ಹಿರಿಯ ಐಎಎಸ್ ಅಧಿಕಾರಿ ಅರುಣೀಶ್ ಚಾವ್ಲಾ ಅವರನ್ನು ಕಂದಾಯ ಹಾಗೂ ಹಣಕಾಸು ಸಚಿವಾಲಯದ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಅರುಣೀಶ್ ಚಾವ್ಲಾ ಅವರು ಫಾರ್ಮಾಸ್ಯುಟಿಕಲ್ಸ್ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿದ್ದ ಸಂಜಯ್ ಮಲ್ಹೋತ್ರ ಅವರನ್ನು ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿ ನೇಮಕ ಮಾಡಲಾಗಿತ್ತು.
ಇನ್ನು ಅರುಣೀಶ್ ಚಾವ್ಲಾ ಅವರು ಮುಂದಿನ ಆದೇಶದ ವರೆಗೆ ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿಯಾಗಿ ಹೆಚ್ಚುವರಿ ಜವಾಬ್ದಾರಿ ಹೊಂದಿರುತ್ತಾರೆ. ಇನ್ನು UIDAI (ಆಧಾರ್) ನ ಸಿಇಒ ಅಮಿತ್ ಅಗರ್ವಾಲ್ ಅವರನ್ನು ಫಾರ್ಮಾಸ್ಯುಟಿಕಲ್ಸ್ ಕಾರ್ಯದರ್ಶಿಯಾಗಿ ನಿಯುಕ್ತಿಗೊಳಿಸಲಾಗಿದೆ.
ಇನ್ನು ಮಹತ್ವದ ಬೆಳವಣಿಗೆಯೊಂದರಲ್ಲಿ ಮಣಿಪುರ ಮುಖ್ಯ ಕಾರ್ಯದರ್ಶಿಯಾಗಿದ್ದ ವಿನೀತ್ ಜೋಶಿ ಅವರನ್ನು ಉನ್ನತ ಶಿಕ್ಷಣ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
1992 ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವ ಜೋಶಿ ಅವರನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಮಣಿಪುರದ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು. ಆಗ ಅವರು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಜವಳಿ ಕಾರ್ಯದರ್ಶಿ ರಚನಾ ಶಾ ಅವರನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಪ್ರಸ್ತುತ ಮಹಾರಾಷ್ಟ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಐಎಎಸ್ ಅಧಿಕಾರಿ ಸಂಜಯ್ ಸೇಥಿ ಅವರು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಹೊಸ ಕಾರ್ಯದರ್ಶಿಯಾಗಲಿದ್ದಾರೆ.
ಶಾ ಬದಲಿಗೆ ಜವಳಿ ಕಾರ್ಯದರ್ಶಿಯಾಗಿ ನೀಲಂ ಶಮ್ಮಿ ರಾವ್ ನೇಮಕಗೊಂಡಿದ್ದಾರೆ. ಪ್ರಸ್ತುತ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವಿಶೇಷ ಕಾರ್ಯದರ್ಶಿಯಾಗಿರುವ ನೀರಜಾ ಶೇಖರ್ ಅವರು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯ ಅಡಿಯಲ್ಲಿ ರಾಷ್ಟ್ರೀಯ ಉತ್ಪಾದಕತೆ ಮಂಡಳಿಯ ಮಹಾನಿರ್ದೇಶಕರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.




